ನವದೆಹಲಿ:ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಭಾರತವು ವಿವಿಧ ದೇಶಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ. ಸುಡಾನ್ ದೇಶದಲ್ಲಿನ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ ಮತ್ತು ಈ ಹಂತದಲ್ಲಿ ಜನರ ಓಡಾಟವು ತುಂಬಾ ಅಪಾಯಕಾರಿಯಾಗಿದೆ ವರದಿ ಹೇಳಿವೆ. ಸುಡಾನ್‌ನಲ್ಲಿ ಕಳೆದ ಆರು ದಿನಗಳಿಂದ ದೇಶದ ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವೆ ಭೀಕರ ಕಾದಾಟ ನಡೆಯುತ್ತಿದೆ. ಈ ಯುದ್ಧದಲ್ಲಿ ಈಗಾಗಲೇ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರತದ ಪ್ರಜೆಗಳು ಎಲ್ಲಿಯೇ ಇದ್ದರೂ ಅವರ ಯೋಗ ಕ್ಷೇಮವೇ ತನಗೆ ಮುಖ್ಯವಾಗಿದೆ ಎಂದು ಭಾರತ ಹೇಳಿದೆ.
ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳು ಸುಡಾನ್‌ನಲ್ಲಿ ಪ್ರಮುಖ ಪಾತ್ರ ಹೊಂದಿವೆ ಮತ್ತು ಅದಕ್ಕೆ ಅನುಗುಣವಾಗಿ ಭಾರತವು ಅವುಗಳೊಂದಿಗೆ ಮಾತುಕತೆ ನಡೆಸುತ್ತಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ಮತ್ತು ಯುಎಇಯ ವಿದೇಶಾಂಗ ಸಚಿವರೊಂದಿಗೆ ಈಗಾಗಲೇ ಮಾತನಾಡಿದ್ದಾರೆ. ಸುಡಾನ್‌ನಲ್ಲಿ ಭಾರತಕ್ಕೆ ಅಗತ್ಯವಾದ ಸಹಾಯ ಮಾಡುವುದಾಗಿ ಎರಡೂ ದೇಶಗಳ ವಿದೇಶಾಂಗ ಮಂತ್ರಿಗಳು ಜೈಶಂಕರ್ ಅವರಿಗೆ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸುಡಾನ್‌ನಲ್ಲಿ ಗಣನೀಯ ಅಸ್ತಿತ್ವ ಹೊಂದಿರುವ ಯುಎನ್‌ನೊಂದಿಗೆ ಭಾರತವೂ ಕಾರ್ಯನಿರ್ವಹಿಸುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸುಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಪರಿಸ್ಥಿತಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೆಲವೊಂದು ವಿಷಯಗಳನ್ನು ನಾವು ಬಹಿರಂಗಪಡಿಸುತ್ತಿಲ್ಲ ಎಂದು, ಮೇಲೆ ಉಲ್ಲೇಖಿಸಿದ ಮೂಲವು ಹೇಳಿದೆ.