ನವದೆಹಲಿ:ಗಡಿಯಲ್ಲಿ ಚೀನಾ ಮತ್ತೆ ಖ್ಯಾತೆ ತೆಗೆದಿದೆ. ಅರುಣಾಚಲಪ್ರದೇಶದ ವಾಸ್ತವ ಗಡಿರೇಖೆ ದಾಟಿ ಬಂದ ಚೀನಾ ಸೈನಿಕರನ್ನು, ಭಾರತೀಯ ಸೈನಿಕರು ತಡೆದಾಗ ಹೊಡೆದಾಟ ನಡೆದಿದೆ. ಗಲಾಟೆಯಲ್ಲಿ ಉಭಯ ಸೈನಿಕರು ಗಾಯಗೊಂಡಿದ್ದಾರೆ. ಇದೀಗ ಸಂಸತ್ನಲ್ಲಿ ಸದ್ದು ಮಾಡುತ್ತಿದೆ. ಸದನಗಳಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಕೇಳಿದೆ.
ಸಂಸದ ಮನೀಶ್ ತಿವಾರಿ ಅರುಣಾಲಪ್ರದೇಶದಲ್ಲಿ ಚೀನಾದ ಗಡಿ ತಂಟೆ ಬಗ್ಗೆ ಆತಂಕವಿದೆ. ಆ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು. ಸಂಸತ್ತಿನಲ್ಲಿ ಚರ್ಚೆ ಮೂಲಕ ಈ ಬಗ್ಗೆ ಗಮನ ಸೆಳೆಯಬೇಕಾಗಿದೆ. ಹಲವು ಸುತ್ತಿನ ಮಾತುಕತೆಯ ಬಳಿಕವೂ ಚೀನಾ ಕಾಲುಕೆರೆದು ದೇಶದ ಮೇಲೆ ಬರುತ್ತಿರೋದೇಕೆ ಎಂದು ನೋಟಿಸ್ನಲ್ಲಿ ಪ್ರಶ್ನಿಸಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಚೀನಾ ತಂಟೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಉಭಯ ಸದನಗಳಿಂದ ಕಾಂಗ್ರೆಸ್ ನೋಟಿಸ್ ನೀಡಿದೆ.
ರಾಜನಾಥ್ ಸಿಂಗ್ ಉನ್ನತ ಮಟ್ಟದ ಸಭೆ:ಚೀನಾ ಗಡಿಯಲ್ಲಿ ಕಿರಿಕ್ ನಡೆಸಿದ ಬೆನ್ನಲ್ಲೇ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.