ನವದೆಹಲಿ:ಇಸ್ರೇಲ್‌ನೊಂದಿಗಿನ ರಕ್ಷಣಾ ಒಪ್ಪಂದದ ಭಾಗವಾಗಿ 2017 ರಲ್ಲಿ ಭಾರತ ಸರ್ಕಾರ ಪೆಗಾಸಸ್ ಸ್ಪೈ ಟೂಲ್ ಅನ್ನು ಖರೀದಿಸಿದೆ ಎಂದು ಅಮೆರಿಕದ ಸುದ್ದಿ ಪತ್ರಿಕೆಯಾದ 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಇತರ ಗಣ್ಯ ವ್ಯಕ್ತಿಗಳ ಮೇಲೆ ಕಣ್ಣಿಡಲು ಕೆಲವು ಸರ್ಕಾರಗಳು ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿ ಬೇಹುಗಾರಿಕೆ ನಡೆಸಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಭಾರತದಲ್ಲಿ ಇದು ಕಳೆದ ವರ್ಷ ಭಾರಿ ವಿವಾದವು ಸ್ಫೋಟಗೊಳ್ಳಲು ಕಾರಣವಾಗಿತ್ತು.
ವರದಿಯಲ್ಲೇನಿದೆ?:ದಿ ಬ್ಯಾಟಲ್ ಫಾರ್ ದಿ ವರ್ಲ್ಡ್ಸ್ ಮೋಸ್ಟ್ ಪವರ್‌ಫುಲ್ ಸೈಬರ್ ವೆಪನ್' ಎಂಬ ಶೀರ್ಷಿಕೆಯ ಅಡಿ ನ್ಯೂಯಾರ್ಕ್ ಟೈಮ್ಸ್ ಮಾಡಿದ ವರದಿಯಲ್ಲಿ, ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆ 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು USD 2 ಬಿಲಿಯನ್ (2 ಬಿಲಿಯನ್ ಡಾಲರ್) ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಒಪ್ಪಂದದ ಕೇಂದ್ರ ಬಿಂದುಗಳಾಗಿವೆ ಎಂದು ಉಲ್ಲೇಖಿಸಲಾಗಿದೆ.
ಇಸ್ರೇಲಿ ಸಂಸ್ಥೆ ಎನ್ಎಸ್ಒ ಗ್ರೂಪ್ ಸುಮಾರು ಒಂದು ದಶಕದಿಂದ ತನ್ನ ಸಾಫ್ಟ್‌ವೇರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ಪ್ರಪಂಚದಾದ್ಯಂತದ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ.