ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹುಟ್ಟಿಕೊಂಡಿರುವ I.N.D.I.A ಕೂಟದಲ್ಲಿ ಸೀಟು ಹಂಚಿಕೆ ತಲೆನೋವಾಗಿದೆ. ಬಿಹಾರದಲ್ಲಿ ಜೆಡಿಯು ಮತ್ತು ಕಾಂಗ್ರೆಸ್ ನೇರಾನೇರ ಬೈದಾಡಿಕೊಂಡಿವೆ. ಇದರ ಬೆನ್ನಲ್ಲೇ ದಿಲ್ಲಿಯಲ್ಲಿನ ಲೋಕಸಭಾ ಸೀಟು ಹಂಚಿಕೆಯ ಬಗ್ಗೆ ಇಂದು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮಾತುಕತೆಗೆ ಸಿದ್ಧವಾಗಿವೆ.
ಉಭಯ ಪಕ್ಷಗಳ ನಡುವೆ ಇಂದು ಮೊದಲ ಸುತ್ತಿನ ಮಾತುಕತೆ ನಡೆಯಲಿದೆ. 7 ಲೋಕಸಭಾ ಸ್ಥಾನಗಳ ಪೈಕಿ ಯಾರು ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಇಂದಿನ ಸಭೆಗೆ ಆಪ್ ಪಕ್ಷದ ಪರವಾಗಿ ಸಂಸದ ಸಂದೀಪ್ ಪಾಠಕ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ನಿಂದ ಸಂದೀಪ್ ದೀಕ್ಷಿತ್, ಅಭಿಷೇಕ್ ದತ್ ಇನ್ನಿತರರು ಸಭೆಗೆ ಹಾಜರಾಗಲಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಶೀಘ್ರ ನಿರ್ಧಾರ:ಪಂಜಾಬ್ ಮತ್ತು ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷ ರಾಜ್ಯಗಳ ಮೇಲೆ ಹಿಡಿತ ಹೊಂದಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸಲಾಗುವುದು. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎಲ್ಲ ಪಕ್ಷಗಳು ಸೀಟು ಹಂಚಿಕೆಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಚರ್ಚೆ ಆಯಾ ಪಕ್ಷಗಳು ನಾಯಕರೊಂದಿಗೆ ಚರ್ಚೆ ನಡೆಯಲಿದೆ ಎಂದು ಆಪ್ ಸಂಸದ ಸಂಸದ ಸಂದೀಪ್ ಪಾಠಕ್ ಹೇಳಿದರು.
ಸೀಟು ಹಂಚಿಕೆ ಪ್ರಕ್ರಿಯೆ ಸರಿಯಾದ ದೆಸೆಯಲ್ಲಿ ಸಾಗುತ್ತಿದೆ. ಇಂದು ಕಾಂಗ್ರೆಸ್ ಜೊತೆಗೆ ಚರ್ಚೆ ನಡೆಯಲಿದೆ. ಎಲ್ಲ ಪಾಲುದಾರ ಪಕ್ಷಗಳು ಗಂಭೀರತೆ ಕಾಪಾಡಲಿವೆ. ಸಾಧ್ಯವಾದಷ್ಟು ಬೇಗ ಸೀಟು ಹಂಚಿಕೆ ಮುಗಿಯಲಿದೆ. ಸ್ಥಳೀಯ ನಾಯಕರ ಅಭಿಪ್ರಾಯವನ್ನು ಪರಿಗಣಿಸಿ, ಸೀಟು ಹಂಚಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.