ಇಂಫಾಲ (ಮಣಿಪುರ):ಜನಾಂಗೀಯ ಸಂಘರ್ಷದಿಂದ ನಲುಗಿರುವ ಹಾಗೂ ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿ ಖುದ್ದು ಅವಲೋಕಿಸಲು ಎರಡು ದಿನಗಳ ಭೇಟಿಗಾಗಿ ‘ಇಂಡಿಯಾ’ ಮೈತ್ರಿಕೂಟದ 16 ಪಕ್ಷಗಳ 21 ಸಂಸದರ ನಿಯೋಗ ಶನಿವಾರ ರಾಜಧಾನಿ ಇಂಫಾಲ್‌ಗೆ ಆಗಮಿಸಿತು. ಮಣಿಪುರವು ಕಳೆದ ಮೂರು ತಿಂಗಳಿನಿಂದ ಜನಾಂಗೀಯ ದ್ವೇಷದಿಂದ ಹೊತ್ತಿ ಉರಿಯುತ್ತಿದ್ದು, ಸದ್ಯ ಅಲ್ಲಿನ ಪರಿಸ್ಥಿತಿಯನ್ನು ಈ ನಿಯೋಗ ಅವಲೋಕಿಸಲಿದೆ.
ಮೇ 3 ರಂದು ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೂ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಿಯೋಗವು ಕಣಿವೆ ಮತ್ತು ಗುಡ್ಡಗಾಡು ಜಿಲ್ಲೆಗಳಿಗೆ ಭೇಟಿ ನೀಡಿ ಸಂತ್ರಸ್ತ ಜನರೊಂದಿಗೆ ಮಾತುಕತೆ ನಡೆಸಲಿದೆ. ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನೂ ಭೇಟಿಯಾಗುವ ಸಾಧ್ಯತೆ ಇದೆ ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್ ಹೇಳಿದ್ದಾರೆ.
“ನಾವು ಚುರಚಂದಪುರ ಮತ್ತು ಮಣಿಪುರದ ಇತರ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಮುಖ್ಯಮಂತ್ರಿ (ಎನ್. ಬಿರೇನ್ ಸಿಂಗ್) ವಿಲನ್ ಆಗಿರುವುದರಿಂದ ನಾವು ಅವರನ್ನು ಭೇಟಿಯಾಗುವುದಿಲ್ಲ ಎಂದು ದೇವ್ ತಿಳಿಸಿದರು.
ಮಣಿಪುರ ಬಿಕ್ಕಟ್ಟು ಈ ಮಟ್ಟಕ್ಕೆ ಹರಡಲು ಮತ್ತು ಹಲವರ ಜೀವಹಾನಿ ಆಗಲು ಬಿಜೆಪಿ ಮತ್ತು ಅದರ ಕಪಿಮುಷ್ಠಿಯಲ್ಲಿರುವ ಸರ್ಕಾರಗಳೇ ನೇರ ಕಾರಣ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಉಭಯ ಸದನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಿಯೋಗದ ಸದಸ್ಯರಾದ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಸಿಂಗ್, ಸುಶ್ಮಿತಾ ದೇವ್, ಕನಿಮೋಳಿ ಕರುಣಾನಿಧಿ, ಸಂತೋಷ್ ಕುಮಾರ್, ಎ.ಎ. ರಹೀಮ್, ಮನೋಜ್ ಕುಮಾರ್ ಝಾ, ಜಾವೇದ್ ಅಲಿ ಖಾನ್, ಮಹುವಾ ಮಜಿ, ಪಿ.ಪಿ. ಮಹಮ್ಮದ್ ಫೈಝಲ್, ಅನೀಲ್ ಪ್ರಸಾದ್ ಹೆಗ್ಡೆ, ಇ.ಟಿ. ಮಹಮ್ಮದ್ ಬಶೀರ್, ಎನ್.ಕೆ. ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಅರವಿಂದ್ ಸಾವಂತ್, ಡಿ.ರವಿಕುಮಾರ್, ತಿರು ತೋಲ್ ತಿರುಮಾವಳವನ್, ಜಯಂತ್ ಸಿಂಗ್, ಫುಲೋ ದೇವಿ ನೇತಮ್ ಮತ್ತು ಕೆ.ಸುರೇಶ್ ಸೇರಿದಂತೆ 16 ಪಕ್ಷಗಳ 21 ಸಂಸದರು ದೆಹಲಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮಣಿಪುರ ತಲುಪಿದ್ದಾರೆ.
ಜು.29 ಮತ್ತು 30 ರಂದು ಪ್ರತಿಪಕ್ಷ ಸಂಸದರ ನಿಯೋಗವು ಮಣಿಪುರಕ್ಕೆ ಭೇಟಿ ನೀಡಲಿದ್ದು, ರಾಜ್ಯದ ನೈಜ ಪರಿಸ್ಥಿತಿಯನ್ನು ಖುದ್ದು ಅವಲೋಕನ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕರಾದ ಗೌರವ್ ಗೊಗೊಯಿ ಹಾಗೂ ಮಾಣಿಕ್ಯಂ ಟ್ಯಾಗೋರ್ ನಿನ್ನೆಯಷ್ಟೇ ತಿಳಿಸಿದ್ದರು. ಮಣಿಪುರ ವಿಚಾರವಾಗಿ ಸಂಸತ್ನಲ್ಲಿ ತೀವ್ರ ಗದ್ದಲ ಎಬ್ಬಿಸುತ್ತಿರುವ ಪ್ರತಿಪಕ್ಷಗಳು ಪ್ರಧಾನಿ ಮೋದಿ ಈ ಬಗ್ಗೆ ಉತ್ತರ ನೀಡುವಂತೆ ಒಟ್ಟು ಹಿಡಿದಿವೆ. ಇದರ ಮುಂದುವರಿದ ಭಾಗವಾಗಿ ಪ್ರತಿಪಕ್ಷಗಳ ನಿಯೋಗ ಇಂದು ಮತ್ತು ನಾಳೆ ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡಿ ಸಂತ್ರಸ್ತರ ಜೊತೆ ಸಂವಾದ ನಡೆಸಲಿದೆ. ಜೂನ್ 29-30 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ವಿಪಕ್ಷಗಳ 20 ಜನರ ನಿಯೋಗ ಭೇಟಿ.. ಸಂತ್ರಸ್ತರ ಜೊತೆ ಸಂವಾದ ನಡೆಸಿ ಸರ್ಕಾರಕ್ಕೆ ವರದಿ