ನ್ಯೂಯಾರ್ಕ್(ಅಮೆರಿಕ): ಉಕ್ರೇನ್ನಲ್ಲಿ ಹಿಂಸಾಚಾರವನ್ನು ನಿಲ್ಲಿಸಿ, ಕದನ ವಿರಾಮ ಘೋಷಿಸುವಂತೆ ಭಾರತ ಪುನರುಚ್ಚರಿಸಿದೆ. ಉಕ್ರೇನ್‌ನ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಉಪ ಖಾಯಂ ಪ್ರತಿನಿಧಿ ಆರ್ ರವೀಂದ್ರ, ಉಕ್ರೇನ್‌ನ ಈಗಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾನವೀಯತೆ, ತಟಸ್ಥತೆ, ನಿಷ್ಪಕ್ಷಪಾತ, ಮತ್ತು ಸ್ವಾತಂತ್ರ್ಯ ಸೇರಿದಂತೆ ಯಾವುದೇ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.
ನಾವು ಸಂಘರ್ಷದ ಆರಂಭದಿಂದಲೂ ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಯನ್ನು ಅನುಸರಿಸುವ ಅಗತ್ಯವನ್ನು ನಾವು ಒತ್ತಿಹೇಳಿದ್ದೇವೆ. ಮುಗ್ಧ ಮಾನವ ಜೀವಗಳು ಅಪಾಯದಲ್ಲಿರುವಾಗ, ರಾಜತಾಂತ್ರಿಕತೆಯು ಏಕೈಕ ಮಾರ್ಗವಾಗಿದೆ ಎಂದು ಆರ್ ರವೀಂದ್ರ ಅಭಿಪ್ರಾಯಪಟ್ಟರು. ಇದಲ್ಲದೆ, ಶಾಶ್ವತ ಮಾನವೀಯ ಕಾರಿಡಾರ್‌ಗಳ ಸ್ಥಾಪನೆ ಸೇರಿದಂತೆ ಅಗತ್ಯ ಮಾನವೀಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಲು ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಅಂತಾರಾಷ್ಟ್ರೀಯ ಸಮುದಾಯ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.