ರಾಂಪುರ (ಉತ್ತರಪ್ರದೇಶ): ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದ ಉತ್ತರಪ್ರದೇಶದ ಶಬ್ನಮ್‌ಳನ್ನ ಶೀಘ್ರ ಗಲ್ಲಿಗೇರಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಮರಣ ದಂಡನೆಗೆ ಒಳಗಾಗಲಿರುವ ಮೊದಲ ಮಹಿಳೆ ಇವರಾಗಿದ್ದಾರೆ. ಪ್ರಸ್ತುತ ರಾಂಪುರ ಜಿಲ್ಲಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಶಬ್ನಮ್ಗೆ ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ:ಶಬ್ನಮ್ ಹಾಗೂ ಸಲೀಂ ಎಂಬ ವ್ಯಕ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಶಬ್ನಮ್ ಕುಟುಂಬಸ್ಥರ ವಿರೋಧವಿತ್ತು. ಪ್ರೇಮಕ್ಕೆ ಅಡ್ಡಿಯಾದ ಜೀವ ತೆಗೆಯಲು ನಿರ್ಧರಿಸಿದ ಆಕೆ, ಸಲೀಂ ಜೊತೆ ಸೇರಿಕೊಂಡು 2008ರ ಏಪ್ರಿಲ್ 14ರಂದು ತನ್ನ ತಂದೆ, ತಾಯಿ, ಇಬ್ಬರು ಸಹೋದರರು, ಸಹೋದರಿ, ಸೋದರ ಮಾವ ಹಾಗೂ 10 ವರ್ಷದ ಸೋದರಳಿಯನನ್ನು ಕೊಲೆ ಮಾಡಿದ್ದರು. ಊಟದಲ್ಲಿ ಮಾತ್ರೆ ಹಾಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಘಟನೆ ನಡೆದ ವೇಳೆ ಶಬ್ನಮ್ ಗರ್ಭಿಣಿ ಕೂಡ ಆಗಿದ್ದರು.
ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಶಬ್ನಮ್ ಮತ್ತು ಸಲೀಂ ಇಬ್ಬರನ್ನೂ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಎರಡು ವರ್ಷಗಳ ಕಾಲಾವಧಿಯಲ್ಲಿ 100 ಬಾರಿ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, 649 ಪ್ರಶ್ನೆಗಳನ್ನು ಕೇಳಿ, ಕೊನೆಯದಾಗಿ 160 ಪುಟಗಳ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತ್ತು.
ಸಲೀಂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, 2010ರ ಜುಲೈ 14ರಂದು ಇಬ್ಬರಿಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಅಪರಾಧಿಗಳಿಬ್ಬರೂ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. ಬಳಿಕ ಶಬ್ನಮ್ ಮತ್ತು ಸಲೀಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ಸಫಲರಾಗಲಿಲ್ಲ. ಎಲ್ಲಾ ಕಾನೂನು ಆಯ್ಕೆಗಳು ಖಾಲಿಯಾದಾಗ ಅಂದಿನ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರು. ಆದರೆ ಇದನ್ನು ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು.
ಮಥುರಾ ಜೈಲು ಹಾಗೂ ಮಹಿಳೆಗೆ ಮರಣದಂಡನೆ