ಉಪ್ಪು ಉತ್ಪಾದನೆ ಮತ್ತು ವಿತರಣೆ ಬ್ರಿಟಿಷರಿಗೆ ಬಹಳ ಲಾಭದಾಯಕ ವ್ಯವಹಾರವಾಗಿತ್ತು. ಭಾರತೀಯರು ಉಪ್ಪನ್ನು ಸ್ವತಂತ್ರವಾಗಿ ಉತ್ಪಾದಿಸುವುದನ್ನು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸುವ ಕಾನೂನುಗಳ ಸರಣಿಯನ್ನು ಅವರು ಪರಿಚಯಿಸಿದರು. ಇದು ಬಡವರ ಮೇಲೆ ಪರಿಣಾಮ ಬೀರಿತು. ಬ್ರಿಟಿಷರು ಭಾರತೀಯ ಉಪ್ಪಿನ ಮೇಲೆ ಆಮದು ಮಾಡಿಕೊಳ್ಳುವ ಸಲುವಾಗಿ ಕಠಿಣ ತೆರಿಗೆಗಳನ್ನು ವಿಧಿಸಿದ್ದರು. ಇದು ಬ್ರಿಟಿಷ್ ವ್ಯಾಪಾರಿಗಳಿಗೆ ಬಹಳ ಪ್ರಯೋಜನ ನೀಡಿತು.
ಮಹಾತ್ಮ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಲಾಹೋರ್ ಅಧಿವೇಶನದಲ್ಲಿ ನಾಗರಿಕ ಅಸಹಕಾರ ಚಳವಳಿಗೆ ಐತಿಹಾಸಿಕ ಕರೆ ನೀಡಿದರು. ಕರೆ ನಂತರ, ದೇಶಾದ್ಯಂತ ಸತ್ಯಾಗ್ರಹಿಗಳು 'ಉಪ್ಪಿನ ಕಾನೂನು' ಮುರಿಯಲು ನಿರ್ಧರಿಸಿದರು. ಆ ಹೋರಾಟದ ಮೊದಲ ಹಂತವೇ ನಾಗರಿಕ ಅಸಹಕಾರ ಚಳವಳಿ.
ಒಡಿಶಾದಲ್ಲಿ ಉಪ್ಪಿನ ನಡಿಗೆ 'ಇಂಚುಡಿ'ಯಿಂದ ಆರಂಭ
ಉಪ್ಪಿನ ಈ ಕಾನೂನು ಒಡಿಶಾ ಮೇಲೆ ಹೆಚ್ಚು ಪರಿಣಾಮ ಬೀರಿತು. ಏಕೆಂದರೆ ಇದು ರಾಜ್ಯದ ಪ್ರಮುಖ ಉದ್ಯಮವಾಗಿದ್ದು, ಒಡಿಶಾದ ವಿಶಾಲವಾದ ಕರಾವಳಿಯಿಂದಾಗಿ ಕೃಷಿಗೆ ಏಕೈಕ ಅಂಗಸಂಸ್ಥೆ ಉದ್ಯಮವಾಗಿದೆ. ಒಡಿಶಾದಲ್ಲಿ ಉಪ್ಪಿನ ಸತ್ಯಾಗ್ರಹವನ್ನು 1930 ರಲ್ಲಿ ಉತ್ಕಲ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೇಕೃಷ್ಣ ಮಹತಾಬ್ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಒಡಿಶಾದಲ್ಲಿ ಉಪ್ಪಿನ ನಡಿಗೆ 'ಇಂಚುಡಿ'ಯಿಂದ ಆರಂಭವಾಯಿತು ಮತ್ತು 'ಎರಡನೇ ದಂಡಿ' ಎಂದು ಇದನ್ನು ಕರೆಯಲಾಯಿತು. ಶಾಂತಿ ಸ್ತೂಪ ಮತ್ತು ಸ್ಮೃತಿ ಪೀಠ ಸ್ಮಾರಕಗಳು ಉಪ್ಪಿನ ಸತ್ಯಾಗ್ರಹದಲ್ಲಿ ಈ ಹಳ್ಳಿಯ ಪಾತ್ರವನ್ನು ನೆನಪಿಸುತ್ತವೆ.
13 ಏಪ್ರಿಲ್ 1930 - ಇಂಚುಡಿಯಲ್ಲಿ ಉಪ್ಪಿನ ಕಾನೂನು ಮುರಿತ
ಗಾಂಧಿ ನೀಡಿದ ಕರೆ ಅನುಸರಿಸಿ, 21 ಸ್ವಯಂಸೇವಕರು ಗೋಪಬಂಧು ಚೌಧರಿ ಮತ್ತು ಆಚಾರ್ಯ ಹರಿಹರ್ ದಾಸ್ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹದ ಪಾದಯಾತ್ರೆಯನ್ನು ಕಟಕ್‌ನ ಸ್ವರಾಜ್ ಆಶ್ರಮದಿಂದ ಇಂಚುಡಿಗೆ 6 ಏಪ್ರಿಲ್ 1930 ರಂದು ನಡೆಸಿದರು. ಗೋಪಾಬಂಧು ಚೌಧರಿ ಅವರನ್ನು ಏಪ್ರಿಲ್ 9 ರಂದು ಬಂಧಿಸಲಾಯಿತು. ಈ ಗುಂಪು ಏಪ್ರಿಲ್ 12 ರಂದು ಬಾಲಸೋರ್ ತಲುಪಿತು ಮತ್ತು 13 ಏಪ್ರಿಲ್ 1930 ರಂದು ಅವರು ಇಂಚುಡಿಯಲ್ಲಿ ಉಪ್ಪಿನ ಕಾನೂನನ್ನು ಮುರಿದರು. ಉಪ್ಪಿನ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಹಲವಾರು ಸತ್ಯಾಗ್ರಹಿಗಳನ್ನು ಬಂಧಿಸಲಾಯಿತು. ಈ ವೇಳೆ ಅನೇಕರು ಗಾಯಗೊಂಡರು.
ಬಾಲಸೋರ್‌ನಲ್ಲಿನ ಇಂಚುಡಿಯ ಉಪ್ಪಿನ ಸತ್ಯಾಗ್ರಹವನ್ನು ಮಹಾತ್ಮ ಗಾಂಧೀಜಿ ನಡೆಸಿದ ದಂಡಿ ಯಾತ್ರೆ ನಂತರ ನಡೆದ ಅತಿದೊಡ್ಡ ಹೋರಾಟ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ 'ಎರಡನೇ ದಂಡಿ' ಅಥವಾ 'ಒಡಿಶಾದ ದಂಡಿ' ಎಂದು ಕರೆಯಲಾಗುತ್ತದೆ.
2003 ರಲ್ಲಿ ಈ ಸ್ಥಳ ಪ್ರವಾಸಿ ತಾಣವೆಂದು ಘೋಷಣೆ
ಉಪ್ಪಿನ ಕಾನೂನು ಮುರಿದ ಈ ಸ್ಥಳವು ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಆದರೆ, ಸೀಗಡಿ ಸಂಸ್ಕೃತಿಗಾರರಿಂದ ಸಮುದ್ರ ಸವೆತ ಮತ್ತು ಅತಿಕ್ರಮಣದಿಂದಾಗಿ ಸತ್ಯಾಗ್ರಹಿಗಳ ನೆನಪುಗಳು ನಶಿಸಿಹೋಗುತ್ತಿವೆ. 2003 ರಲ್ಲಿ ಈ ಸ್ಥಳವನ್ನು ಪ್ರವಾಸಿ ತಾಣವೆಂದು ಘೋಷಿಸಲಾಗಿದ್ದರೂ, ಸರಿಯಾದ ಪ್ರಚಾರದ ಕೊರತೆಯಿಂದಾಗಿ ಬೆರಳೆಣಿಕೆಯಷ್ಟು ಜನ ಮಾತ್ರ ಇತ್ತ ಆಕರ್ಷಿತರಾಗುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟದ ನೆನಪಿನ ಬುತ್ತಿ ಬಿಚ್ಚುವ ಈ ಸ್ಥಳ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಗಬೇಕಿದೆ. ಅದಕ್ಕಾಗಿ ಇಂಚುಡಿಗೆ ರಾಷ್ಟ್ರೀಯ ಮನ್ನಣೆ ದೊರೆಯಬೇಕಿದೆ.