ಹೈದರಾಬಾದ್(ತೆಲಂಗಾಣ): ತೆಲಂಗಾಣ ರಾಜ್ಯದ ಕಾಚಿಗುಡ-ಯಶವಂತಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದಾರೆ. ಈ ಸ್ಥಳೀಯ ಸೆಮಿ-ಹೈ ಸ್ಪೀಡ್ ರೈಲು ಹೈದರಾಬಾದ್ ನಗರದ ಕಾಚಿಗುಡ ರೈಲು ನಿಲ್ದಾಣದಿಂದ ಸಂಚಾರ ಪ್ರಾರಂಭಿಸಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲಿದೆ.
ಈ ಮಾರ್ಗಗಳಲ್ಲಿ ಸಂಚಾರ: ಈ ರೈಲು ಮಹಬೂಬ್‌ನಗರ, ಕರ್ನೂಲ್ ಟೌನ್, ಅನಂತಪುರ ಮತ್ತು ಧರ್ಮಾವರಂ ಮಾರ್ಗವಾಗಿ ಪ್ರಯಾಣಿಸಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾಚಿಗುಡ- ಯಶವಂತಪುರ ನಡುವಿನ 610 ಕಿ.ಮೀ ದೂರವನ್ನು 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದಿಂದ ಕಾಚಿಗುಡ-ಯಶವಂತಪುರ ನಡುವಿನ ಪ್ರಯಾಣದ ಸಮಯ 2 ಗಂಟೆ 50 ನಿಮಿಷ ತಗ್ಗಲಿದೆ. ಸೋಮವಾರದಿಂದ ಯಶವಂತಪುರದಿಂದ ವಂದೇ ಭಾರತ್ ರೈಲು ಸೇವೆ ಪ್ರಾರಂಭವಾಗಲಿದೆ. 26ರಂದು ಕಾಚಿಗುಡದಿಂದ ರೈಲು ಸೇವೆ ಪ್ರಾರಂಭವಾಗಲಿದೆ. ಈ ರೈಲು 8 ಬೋಗಿಗಳನ್ನೂಳಗೊಂಡಿದೆ. ಇದರಲ್ಲಿ 7 ಎಸಿ ಚೇರ್‌ಕಾರ್ ಕೋಚ್‌ಗಳು ಮತ್ತು ಒಂದು ಎಕ್ಸಿಕ್ಯೂಟಿವ್ ಚೇರ್‌ಕಾರ್ ಕೋಚ್ ಇರಲಿದೆ. 530 ಆಸನಗಳ ಸಾಮರ್ಥ್ಯದ ಈ ರೈಲು ಬುಧವಾರ ಹೊರತುಪಡಿಸಿ ವಾರದ ಉಳಿದ 6 ದಿನ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ.
ಟಿಕೆಟ್ ದರ ಎಷ್ಟು?:ಕಾಚಿಗುಡದಿಂದ ಯಶವಂತಪುರಕ್ಕೆ ಊಟದ ಶುಲ್ಕ ಸೇರಿದಂತೆ ಎಸಿ ಚೇರ್ ಕಾರ್ ದರ ರೂ.1,600 ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ ರೂ.2,915 ಇದೆ. ಯಶವಂತಪುರದಿಂದ ಕಾಚಿಗುಡಕ್ಕೆ ಎಸಿ ಚೇರ್ ಕಾರ್ ದರವನ್ನು ರೂ.1,540 ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2,865 ರೂ. ನಿಗದಿಪಡಿಸಲಾಗಿದೆ. ಕಾಚಿಗುಡದಿಂದ ಯಶವಂತಪುರಕ್ಕೆ ಊಟದ ಶುಲ್ಕವನ್ನು ಹೊರತುಪಡಿಸಿ, ಎಸಿ ಚೇರ್ ಕಾರ್ ದರ ರೂ.1,255 ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ ರೂ. 2,515 ನಿರ್ಧರಿಸಲಾಗಿದೆ. ಯಶವಂತಪುರದಿಂದ ಕಾಚಿಗುಡಕ್ಕೆ ಊಟದ ಶುಲ್ಕವನ್ನು ಹೊರತುಪಡಿಸಿ, ಎಸಿ ಚೇರ್ ಕಾರ್ ದರ ರೂ.1,255 ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರವನ್ನು ರೂ.2515 ಎಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ:11 ರಾಜ್ಯ ಸಂಪರ್ಕಿಸುವ 9 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲುಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ
9 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಿಧ ರಾಜ್ಯಗಳ ಒಂಬತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಇಂದು ಪ್ರಾರಂಭಿಸಲಾಗುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಾರಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಿವೆ ಮತ್ತು ಭಾರತದಾದ್ಯಂತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಎಂದು ಹೇಳಿದರು. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸರ್ಕಾರವು ಬಹು ಮಾದರಿಯ ಸಂಪರ್ಕ ಮತ್ತು ಸುಲಭ ಪ್ರಯಾಣದ ಮೇಲೆ ಗಮನ ಹರಿಸುತ್ತಿದೆ ಎಂದು ತಿಳಿಸಿದರು.