ಭಾವನಗರ(ಗುಜರಾತ್): ಸಾಮಾನ್ಯವಾಗಿ ಮರಿಗಳು ಗೂಡಿನಿಂದ ಹೊರಬಂದ ನಂತರ ಮರಿಯ ತಾಯಿಯೇ ಅವುಗಳ ಆರೈಕೆ ಮಾಡಿಕೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ತಾಯಿ ಪಕ್ಷಿ ಸಾವಿಗೀಡಾದರೆ ಮರಿಯ ಗತಿ ಏನು? ಅಂತಹ ಮರಿಗಳನ್ನು ನಾನು ನೋಡಿಕೊಳ್ಳುತ್ತೇನೆ ಮತ್ತು ಅವು ಬೆಳೆದ ತಕ್ಷಣ ನಾನು ಆಕಾಶಕ್ಕೆ ಬಿಡುತ್ತೇನೆ ಎನ್ನುತ್ತಾರೆ ಪಕ್ಷಿ ಪ್ರೇಮಿ ರಾಜುಭಾಯಿ.
ಇವರೇ ಈ ಎಲ್ಲಾ ಪಕ್ಷಿಗಳ ತಾಯಿ. ಇಂಜೆಕ್ಷನ್‌ನ ವಾಲ್ವ್ ಟ್ಯೂಬ್ನಿಂದ ಈ ಪಕ್ಷಿಗಳಿಗೆ ಗುಟುಕು ಆಹಾರ ನೀಡಿ ಮಕ್ಕಳಂತೆ ಸಲಹುತ್ತಿದ್ದಾರೆ. ರಾಜುಭಾಯಿ ಪಕ್ಷಿ ಪ್ರೇಮಿಯಾಗಿದ್ದು, 45 ವರ್ಷಗಳಿಂದ ತಮ್ಮ ಬಳಿಗೆ ಬರುವ ಎಲ್ಲಾ ರೀತಿಯ ಪಕ್ಷಿ ಮರಿಗಳನ್ನು ಸಾಕುತ್ತಿದ್ದಾರೆ.
ಬೇಸಿಗೆಯಲ್ಲಿ ಸಣ್ಣ ಹಕ್ಕಿಗಳ ಮರಿಗಳು ಬರುತ್ತವೆ ಎಂದು ರಾಜುಭಾಯಿ ತಿಳಿಸಿದ್ದಾರೆ. ಮರಿಗಳ ಗಂಟಲಿಗೆ ಕಿರಿಕಿರಿಯಾಗದಂತೆ ಸೈಕಲ್ ವಾಲ್ವ್‌ನ ಟ್ಯೂಬ್ ಅಳವಡಿಸಿ ಗುಟುಕು ಆಹಾರ ನೀಡಲಾಗುತ್ತದೆ. ಈ ಗುಟುಕು ಆಹಾರ ನೀಡಲು ಬರುವ ಇವರನ್ನು ನೋಡಿ ಮರಿಗಳು ಸಂತೋಷದಿಂದ ಶಬ್ಧ ಮಾಡುತ್ತವೆ.
ಪಕ್ಷಿಗಳು ತಮ್ಮ ಮರಿಗಳಿಗೆ ಆಹಾರ ನೀಡುವ ರೀತಿಯಲ್ಲಿಯೇ ರಾಜುಭಾಯಿ ಕೂಡ ಮರಿಗಳಿಗೆ ಆಹಾರವನ್ನು ನೀಡುತ್ತಾರೆ. ಬೇಸಿಗೆಯಲ್ಲಿ ತಿಂಗಳಿಗೆ 30ರಿಂದ 35 ಮರಿಗಳನ್ನ ಜನರು ಇಲ್ಲಿಗೆ ತಂದು ಬಿಡುತ್ತಾರಂತೆ. ಮೀನುಗಳನ್ನೇ ಹೆಚ್ಚಾಗಿ ಸೇವಿಸುವ ಬೆಳ್ಳಕ್ಕಿಗಳ ಮರಿಗಳು ಸಹ ಇಲ್ಲಿವೆ. ಮುಂಗಾರು ಆರಂಭವಾದರೆ ಇಲ್ಲಿಗೆ ತಿಂಗಳಿಗೆ ಸುಮಾರು 90 ಮರಿಗಳನ್ನು ಜನರು ತಂದು ಬಿಡುತ್ತಾರಂತೆ.
ತಾಯಿ ಇಲ್ಲದ ತಬ್ಬಲಿ ಬಾನಾಡಿಗಳಿಗೆ ಇವರೇ ತಾಯಿ.. ಇವರೊಬ್ಬ ಅಪರೂಪದ ಪಕ್ಷಿಪ್ರೇಮಿ.. ಪ್ರತಿ ಮರಿಯನ್ನು ಸಹ ವಿಶೇಷವಾಗಿ ಬೆಳೆಸುವ ರಾಜುಭಾಯಿ ಈ ಮೂಲಕ ಮಾನವೀಯ ನೆಲೆಗಟ್ಟಿನಲ್ಲಿ ನಿಜವಾದ ಪರಿಸರ ಹಾಗೂ ಪಕ್ಷಿಪ್ರೇಮಿಯಾಗಿ ಬದುಕುತ್ತಿದ್ದಾರೆ. ಪಕ್ಷಿಗಳು ಬೆಳೆದು ಅವುಗಳಿಗೆ ರೆಕ್ಕೆ ಬಂದಾಗ ಸ್ವತಂತ್ರವಾಗಿ ಬಿಡಲಾಗುತ್ತದಂತೆ. ಆಗ ಅವರು ತಮ್ಮಷ್ಟಕ್ಕೆ ತಾವು ಹಾರಿ ಹೋಗುತ್ತವೆ ಎನ್ನುತ್ತಾರೆ ಪಕ್ಷಿ ಪ್ರೇಮಿ. ಹಾರಿ ಬಿಟ್ಟ ನಂತರವೂ ಕೆಲವು ಪಕ್ಷಿಗಳು ಆಹಾರಕ್ಕಾಗಿ ಮರಳಿ ಬರುತ್ತವಂತೆ.
ಇನ್ನು ಜೀವನಕ್ಕಾಗಿ ಎಲೆಕ್ಟ್ರಿಕ್ ಅಂಗಡಿಯನ್ನು ನಡೆಸುವ ಇವರಿಗೆ ಜೀವಿಗಳಿಗೆ ಸೇವೆ ಸಲ್ಲಿಸುವುದೇ ಮುಖ್ಯ ಗುರಿಯಾಗಿದೆ. ರಾಜುಭಾಯಿ ಅವರು ಸರ್ಕಾರದಿಂದ ಅಥವಾ ಯಾವುದೇ ಸಂಸ್ಥೆಯಿಂದ ಒಂದು ರೂಪಾಯಿ ಧನಸಹಾಯ ಸಹ ತೆಗೆದುಕೊಳ್ಳುವುದಿಲ್ಲ. ಅವರು ತಮ್ಮ ಸ್ವಂತ ಹಣವನ್ನು ಪಕ್ಷಿಗಳಿಗೆ ಆಹಾರಕ್ಕಾಗಿ ಮತ್ತು ಗಾಯಗೊಂಡ ಪಕ್ಷಿಗಳ ಚಿಕಿತ್ಸೆಗಾಗಿ ಔಷಧವನ್ನು ಖರೀಸುತ್ತಿದ್ದಾರೆ.
ಇದನ್ನೂ ಓದಿ: ತಾಯಿ ಕಳೆದುಕೊಂಡು ಖಿನ್ನತೆಗೊಳಗಾದ.. ಬೇಸರದಿಂದ ನದಿಯಲ್ಲಿ ಬಿಎಂಡಬ್ಲ್ಯೂ ಮುಳುಗಿಸಿ ತೆರಳಿದ!