ಕುಶಿನಗರ:ಬೆಳ್ಳಂಬೆಳಗ್ಗೆಯೇ ದುರಂತ ಸುದ್ದಿ ಬಂದಿದೆ. ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ ಮಲಗಿದ್ದಾಗ ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ ಮಹಿಳೆ ಮತ್ತು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಜೀವಂತವಾಗಿ ದಹನವಾಗಿದ್ದಾರೆ. ಇದು ಸ್ಥಳೀಯರಲ್ಲಿ ಭಾರೀ ಅಚ್ಚರಿ ಮತ್ತು ದುಃಖ ಉಂಟು ಮಾಡಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬೆಂಕಿ ಹೊತ್ತಿಕೊಂಡ ವೇಳೆ ಮನೆಯವರೆಲ್ಲಾ ಮಲಗಿದ್ದರು. ಮನೆಗೆ ಹೇಗೆ ಬೆಂಕಿ ತಾಗಿದೆ ಎಂಬುದೇ ನಿಗೂಢವಾಗಿದೆ. ಇದರಿಂದ ಇಡೀ ಕುಟುಂಬ ಅಗ್ನಿಗೆ ಬಲಿಯಾಗಿದೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ತಕ್ಷಣ ಜನರು ನಂದಿಸಲು ಯತ್ನಿಸಿದರಾದರೂ ಒಳಗಿದ್ದ ಮಹಿಳೆ ಹಾಗೂ ಐವರು ಮಕ್ಕಳು ಸಜೀವ ದಹನವಾಗಿದ್ದಾರೆ. ಶತಪ್ರಯತ್ನದ ನಂತರವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಘಟನೆಯ ವಿವರ:ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಉರ್ಧಾ ಗ್ರಾಮದಲ್ಲಿ ತರಕಾರಿ ವ್ಯಾಪಾರಿ ಸರಜೂ ಎಂಬುವರ ಟಿನ್ ಶೆಡ್ ಮನೆಗೆ ಹಠಾತ್ ಬೆಂಕಿ ಹೊತ್ತಿಕೊಂಡಿದೆ. ಮನೆಯೊಳಗೆ ಮಹಿಳೆ ಸೇರಿದಂತೆ ಐವರು ಮಕ್ಕಳು ಮಲಗಿದ್ದರು. ಮಧ್ಯರಾತ್ರಿ 12.30 ರ ಸುಮಾರಿನಲ್ಲಿ ಗಾಢನಿದ್ದೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಇಡೀ ಮನೆಯನ್ನು ಆವರಿಸಿಕೊಂಡಿದೆ. ಈ ವೇಳೆ ಬೆಂಕಿ ತಗುಲಿದ್ದರಿಂದ ಸಿಲಿಂಡರ್ ಸ್ಫೋಟಗೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ದೊಡ್ಡ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್ ಸ್ಫೋಟದಿಂದಾಗಿ ಮನೆ ಛಿದ್ರವಾಗಿದೆ. ಟಿನ್ಗಳಿಂದ ನಿರ್ಮಿಸಿದ್ದ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಸ್ಫೋಟದ ರಭಸಕ್ಕೆ ಟಿನ್ 20 ಅಡಿ ಎತ್ತರದ ಮರದ ಮೇಲೆ ಸಿಲುಕಿಕೊಂಡಿದೆ.