ನವದೆಹಲಿ: 'ಸ್ವಾತಂತ್ರ್ಯದ ಬಳಿಕ ದೇಶದ ಜನರಿಗೆ ಒಂದೇ ದೃಷ್ಟಿಕೋನದ ಸಿದ್ಧಾಂತವನ್ನು ಹೇರಲಾಯಿತು. ಕಾಂಗ್ರೆಸ್ ಹೊರತಾಗಿ ಯಾರೊಬ್ಬರೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಧೋರಣೆ ಜನರನ್ನು ತಪ್ಪು ದಾರಿಗೆ ತಂದಿತು. ಇದನ್ನು ತೀರಾ ಕುಶಲತೆಯಿಂದ ನಿರ್ವಹಣೆ ಮಾಡಲಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು.
ಲೇಖಕ ಸಂಜೀವ್ ಸನ್ಯಾಲ್ ವಿರಚಿತ "ರೆವಲ್ಯೂಷನರೀಸ್: ದಿ ಅದರ್ ಸ್ಟೋರಿ ಆಫ್ ಇಂಡಿಯಾ ವಿನ್ ಇಟ್ಸ್ ಫ್ರೀಡಂ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಎಷ್ಟಿದೆಯೋ, ಅಷ್ಟೇ ಪ್ರಮಾಣದಲ್ಲಿ ಬೇರೆಯವರೂ ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಅದನ್ನು ಮಾತ್ರ ಮರೆಮಾಡಿ ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ' ಎಂದರು.
'1947 ರಿಂದಲೂ ಈ ಬಗ್ಗೆ ತದೇಕಚಿತ್ತವಾಗಿ ಸುಳ್ಳು ಬಿತ್ತುತ್ತಲೇ ಬರಲಾಗಿದೆ. ಈ ಸುಳ್ಳನ್ನು ತಪ್ಪಾಗಿಸಲು ಲೇಖಕ ಸಂಜೀವ್ ಸನ್ಯಾಲ್ ಅವರು ತಮ್ಮ ದಿ ಅದರ್ ಸ್ಟೋರಿ ಆಫ್ ಇಂಡಿಯಾ ವಿನ್ ಇಟ್ಸ್ ಫ್ರೀಡಂನಲ್ಲಿ ಉಳಿದವರ ಹೋರಾಟಗಳ ಬಗ್ಗೆ ಹೇಳಿದ್ದಾರೆ. ದೇಶದ ಜನರು ಎಲ್ಲ ಸ್ವಾತಂತ್ರ್ಯವೀರರ ಬಗ್ಗೆ ತಿಳಿದುಕೊಳ್ಳಬೇಕು' ಎಂದು ಅಮಿತ್ ಶಾ ಹೇಳಿದರು.
'ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ವಿಧಾನದ ಹೋರಾಟ ಯಾವುದೇ ಪಾತ್ರವನ್ನು ಹೊಂದಿಲ್ಲ ಅಥವಾ ಅದು ಇತಿಹಾಸದ ಭಾಗವೇ ಅಲ್ಲ ಎಂದು ನಾನು ಹೇಳುವುದಿಲ್ಲ. ಇದು ಇತಿಹಾಸದ ಒಂದು ಭಾಗವೇ ಸರಿ. ಕಾಂಗ್ರೆಸ್ ನಡೆಸಿದ ಚಳವಳಿಯಲ್ಲದೇ, ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿದ್ದ ದೇಶಪ್ರೇಮದ ಬೆಂಕಿಯೂ ಇಂದಿನ ನಮ್ಮ ಸ್ವಾತಂತ್ರ್ಯಕ್ಕೆ ಕಾರಣವಾಗಿದೆ. ಇದನ್ನು ನನ್ನಂತೆಯೇ ನಂಬುವ ಜನರಿಗೆ ಮಾತ್ರ ಇದು ಪಥ್ಯವಾಗುತ್ತದೆ' ಎಂದು ಶಾ ತಿಳಿಸಿದರು.