ಬಿಹಾರ : ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಆದ್ರೆ, ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದ್ದು, ಬಿಸಿಗಾಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. 12ನೇ ತರಗತಿಯವರೆಗಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಜೂನ್ 24ರವರೆಗೆ ಸ್ಥಗಿತಗೊಳಿಸಿರುವುದಾಗಿ ಇತ್ತೀಚೆಗೆ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿತ್ತು. ಇದೀಗ ಬಿಸಿಗಾಳಿಯ ಪ್ರಭಾವ ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 28 ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಿಸಿ ಮರು ಆದೇಶ ಹೊರಡಿಸಲಾಗಿದೆ.
"ಜಿಲ್ಲೆಯಲ್ಲಿ ಶಾಖದ ಅಲೆ ಮುಂದುವರೆದಿದೆ. ಹೆಚ್ಚಿನ ತಾಪಮಾನ ಇರುವ ಕಾರಣ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, 12ನೇ ತರಗತಿಯವರೆಗೆ ಅಪರಾಧ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144ರ ಅಡಿಯಲ್ಲಿ ಪಾಟ್ನಾದ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳ (ಪ್ರಿ-ಸ್ಕೂಲ್ ಮತ್ತು ಅಂಗನವಾಡಿ ಕೇಂದ್ರಗಳು ಸೇರಿದಂತೆ) ಶೈಕ್ಷಣಿಕ ಚಟುವಟಿಕೆಗಳನ್ನು ನಿಷೇಧಿಸುತ್ತಿದ್ದೇವೆ. ಈ ಆದೇಶವು ಜೂನ್ 26, 2023 ರಿಂದ ಜಾರಿಗೆ ಬರಲಿದ್ದು, 28 ರವರೆಗೆ ಜಾರಿಯಲ್ಲಿರುತ್ತದೆ" ಎಂದು ಜಿಲ್ಲಾಧಿಕಾರಿ ಡಾ. ಚಂದ್ರ ಶೇಖರ್ ಸಿಂಗ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಬಿಸಿಗಾಳಿಗೆ ಇಬ್ಬರು ಬಲಿ :ಇನ್ನು ಈ ತಿಂಗಳ ಆರಂಭದಲ್ಲಿ ಬಿಹಾರದ ಗಯಾ ಜಿಲ್ಲೆಯಲ್ಲಿರುವ ಅನುಗ್ರಹ ನಾರಾಯಣ್ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ ತೀವ್ರವಾದ ಉಷ್ಣಾಂಶಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ಸೋಮವಾರದವರೆಗೆ ಅನುಗ್ರಹ ನಾರಾಯಣ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 58 ರೋಗಿಗಳು ದಾಖಲಾಗಿದ್ದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ದೇಶಾದ್ಯಂತ ಬಿಸಿಗಾಳಿಯ ಪರಿಣಾಮಗಳನ್ನು ತಗ್ಗಿಸಲು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಸನ್ನದ್ಧತೆ ಕುರಿತು ಪರಿಶೀಲಿಸಿದ್ದರು.