ಭಾರತದಲ್ಲಿ ಮೊದಲ ಬಾರಿಗೆ ಹೃದಯ ಕಸಿ ಚಿಕಿತ್ಸೆ ಸುಮಾರು 20 ಸರ್ಜನ್ಗಳ ತಂಡದ ಮೂಲಕ ಪ್ರೊಫೆಸರ್ ಪನಂಗಿಪಲ್ಲಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಿತು ಎಂದು ವರದಿಗಳು ಹೇಳುತ್ತದೆ. ಈ ಹೃದಯ ಕಸಿ ಸುಮಾರು 59 ನಿಮಿಷಗಳಲ್ಲಿ ನಡೆದಿದ್ದು, ಆ ರೋಗಿ ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದನು.
ಮಾನವ ಅಂಗಾಂಗ ಕಸಿ ಮಸೂದೆ ಜುಲೈ 7 1994ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಕಾಲದಲ್ಲಿ ಪಾಸಾಗಿ, ಅಂಗೀಕಾರಗೊಂಡಿತ್ತು. ಇದಾದ ನಂತರ ಪ್ರೊ.ಪಿ. ವೇಣುಗೋಪಾಲ್ ಏಮ್ಸ್ನಲ್ಲಿ ಅದೇ ವರ್ಷ ಆಗಸ್ಟ್ 3ರಂದು ಹೃದಯ ಕಸಿ ಮಾಡಿದ್ದರು. ಈ ಮಸೂದೆ ಮಾನವ ಅಂಗಾಗವನ್ನು ತೆಗೆಯುವ ಬಗ್ಗೆ, ಸಂಗ್ರಹಣೆ ಮತ್ತು ಕಸಿಯ ಬಗ್ಗೆ ಕೆಲವು ವಿಚಾರಗಳನ್ನ ಬಗ್ಗೆ ತಿಳಿಸುವಂತಿತ್ತು.
ದೇಶದ ಮೊದಲ ಹೃದಯ ಕಸಿ
40 ವರ್ಷದ ರೋಗಿ ದೇವಿರಾಮ್ ಕಾರ್ಡಿಯೋಮಯೋಪತಿ(ಹೃದಯ ಸ್ನಾಯುಗಳಿಗೆ ಸಂಬಂಧಿಸಿದ ರೋಗ) ಎಂಬ ರೋಗದಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ಗೆ ದಾಖಲಾಗಿದ್ದನು. ದೇವಿರಾಮ್ ರಕ್ತದ ಗುಂಪು ಎಬಿ ಪಾಸಿಟಿವ್ ಆಗಿತ್ತು.
ಈ ವೇಳೆ 35 ವರ್ಷದ ಮಹಿಳೆಯೊಬ್ಬಳು ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಳು. ಮಹಿಳೆಯ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ದೇವಿರಾಮ್ಗೆ ಮಹಿಳೆಯ ಹೃದಯ ಕಸಿ ಮಾಡಲು ನಿರ್ಧಾರ ಮಾಡಲಾಯಿತು. ದೇವಿರಾಮ್ಗೆ ಸರ್ಜರಿ ನಡೆದು ಯಶಸ್ವಿಯಾದ ನಂತರ ಕೆಲವು ವರ್ಷಗಳ ನಂತರ ಮೆದುಳಿನ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದನು.
ವಿಶ್ವದಲ್ಲಿ ಮೊದಲ ಹೃದಯ ಕಸಿ
ವಿಶ್ವದಲ್ಲಿ ಮೊದಲ ಬಾರಿಗೆ ಹೃದಯ ಕಸಿ ನಡೆದಿದ್ದು, 1967ರ ಡಿಸೆಂಬರ್ 3ರಂದು. ದಕ್ಷಿಣ ಆಫ್ರಿಕಾದ ರಾಜಧಾನಿಯಾದ ಕೇಪ್ಟೌನ್ನಲ್ಲಿ ಸರ್ಜನ್ ಕ್ರಿಶ್ಚಿಯನ್ ಬರ್ನಾರ್ಡ್ ಎಂಬಾತ ಮೊದಲ ಹೃದಯ ಕಸಿ ಮಾಡಿದ್ದನು.
ಭಾರತದಲ್ಲಿ ಮೊದಲ ಹೃದಯ ಕಸಿ ಮಾಡಿದ್ದ ವೇಣುಗೋಪಾಲ್ ಅವರನ್ನು 2014ರಲ್ಲಿ ಪ್ರಧಾನಿ ಮೋದಿ ಏಮ್ಸ್ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಭಿನಂದಿಸಿದ್ದರು. ವೇಣುಗೋಪಾಲ್ ಅವರಿಗೆ 1998ರಲ್ಲೇ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಭೂಷಣ್ ಪುರಸ್ಕಾರ ಸಂದಿತ್ತು.