ರೇವಾರಿ(ಹರಿಯಾಣ):ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಆತನಿಗೆ ಬಲವಂತವಾಗಿ ಮೂತ್ರ ಮಿಶ್ರಿತ ಮದ್ಯ ಕುಡಿಸಿರುವ ಘಟನೆ ಹರಿಯಾಣದ ರೇವಾರಿಯಲ್ಲಿ ನಡೆದಿದೆ. ಭೈರಾಂಪುರ ಗ್ರಾಮದ ದಲಿತ ಯುವಕನೋರ್ವ ಮದ್ಯ ಸೇವನೆ ಮಾಡಲು ಹಿಂದೇಟು ಹಾಕಿದ್ದು, ಅದೇ ಗ್ರಾಮದ ಇಬ್ಬರು ಆತನ ಮೇಲೆ ಹಲ್ಲೆ ನಡೆಸಿ, ಈ ದುಷ್ಕೃತ್ಯವೆಸಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ, ಇಬ್ಬರು ವ್ಯಕ್ತಿಗಳು ತನ್ನ ಕೈಕಟ್ಟಿ, ತದನಂತರ ಮೂತ್ರದಲ್ಲಿ ಮದ್ಯ ಬೆರೆಸಿ ಕುಡಿಸಿದ್ದಾರೆ. ಜೊತೆಗೆ ನನ್ನ ಬಳಿಯ 10 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆಂದು ಹೇಳಿಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೊಬೈಲ್ ಖರೀದಿ ಮಾಡಲು ಹೊರಟಿದ್ದಾಗ ರೋಹಿತ್ ಮತ್ತು ತುಷಾರ್ ಸಂತ್ರಸ್ತನಿಗೆ ಮದ್ಯ ಕುಡಿಯಲು ಒತ್ತಾಯ ಮಾಡಿದ್ದಾರೆ. ಇದಕ್ಕೆ ನಿರಾಕರಣೆ ಮಾಡಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದು, ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮನೆಗೆ ತೆರಳಿರುವ ವ್ಯಕ್ತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಇದರ ಬೆನ್ನಲ್ಲೇ ಚಿಕಿತ್ಸೆಗಾಗಿ ಆತನನ್ನ ರೇವಾರಿ ಆಸ್ಪತ್ರೆಗೆ ದಾಖಲಿಸಿದ್ದು, ತದನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆಂದು ಹೇಳಿದ್ದಾರೆ.
ಘಟನೆ ಬೆನ್ನಲ್ಲೇ ತಲೆಮರೆಸಿಕೊಂಡಿರುವ ಆರೋಪಿಗಳಿಗೋಸ್ಕರ ಶೋಧಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.