ಸೂರತ್(ಗುಜರಾತ್): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತಿದ್ದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು ಈಗಾಗಲೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಎಲ್ಲೆಡೆ ರಾಷ್ಟ್ರ ಧ್ವಜ ತಯಾರಿ ಸೇರಿದಂತೆ ವಿವಿಧ ಕಾರ್ಯಗಳು ಈಗಾಗಲೇ ಆರಂಭಗೊಂಡಿದೆ. ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಸೂರತ್ನ ಉದ್ಯಮಿಯೊಬ್ಬರು ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕೇಸರಿ ಬಿಳಿ ಹಸಿರು ಬಣ್ಣದ ಕಾರು:ಆಗಸ್ಟ್ 13 ರಿಂದ 15ರವರೆಗೆ ಆಜಾದಿ ಕಾ ಅಮೃತ್ ಮಹೋತ್ಸವ, ಹರ್ ಘರ್ ತಿರಂಗ ಅಭಿಯಾನದಲ್ಲಿ ಜನರನ್ನು ತೊಡಗಿಸಿಕೊಳ್ಳಲು ಸೂರತ್ ಮೂಲದ ಜವಳಿ ಉದ್ಯಮಿ ಸಿದ್ಧಾರ್ಥ್ ದೋಷಿ ಅವರು ವಿಶೇಷ ವಿನೂತನ ಪ್ರಯೋಗ ಮಾಡಿದ್ದಾರೆ. ದೋಷಿ ಅವರು ತಮ್ಮ ತ್ರಿವರ್ಣ ಜಾಗ್ವಾರ್ ಕಾರಿನ ಮೂಲಕ ಸೂರತ್‌ನಿಂದ ದೆಹಲಿವರೆಗೆ 1,150 ಕಿ.ಮೀ ದೂರದ ಜನರನ್ನು ಸಂಪರ್ಕಿಸುವ ಮೂಲಕ ತ್ರಿವರ್ಣ ಧ್ವಜಗಳನ್ನು ವಿತರಿಸಲಿದ್ದಾರೆ.
ಕಾರಿಗೆ ತ್ರಿವರ್ಣ ಬಳಿಸಿದ ಸೂರತ್ ಉದ್ಯಮಿ ರಾಷ್ಟ್ರಧ್ವಜ ವಿತರಣೆ: ಐಷಾರಾಮಿ ಜಾಗ್ವಾರ್ ಕಾರಿಗೆ ದೇಶಭಕ್ತಿಯ ಬಣ್ಣ ಬಳಿಯಲಾಗಿದೆ. ಇದರಿಂದಾಗಿ ಕಾರಿನ ಸಂಪೂರ್ಣ ರೂಪವೇ ಬದಲಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಕಾರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸೂರತ್ ಜನರನ್ನು ದೆಹಲಿಗೆ ಸಂಪರ್ಕಿಸುತ್ತದೆ. ಇದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ತ್ರಿವರ್ಣ ಧ್ವಜಗಳನ್ನೂ ವಿತರಿಸಲಾಗುವುದು.
ಕಾರಿಗೆ ತ್ರಿವರ್ಣ ಬಳಿಸಿದ ಸೂರತ್ ಉದ್ಯಮಿ ಇದನ್ನೂ ಓದಿ:ಪಾವಗಡದಲ್ಲಿ 1750 ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ
ಉದ್ಯಮಿ ಸಿದ್ಧಾರ್ಥ್ ದೋಷಿ ಮಾತನಾಡಿ, ಆಜಾದಿ ಕಾ ಅಮೃತ್ ಮಹೋತ್ಸವವು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ವಿಷಯ. ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೂ ಅರಿವು ಮೂಡಿಸಲು ನನ್ನದೊಂದು ಪ್ರಯತ್ನ. ನಾವು ಸೂರತ್‌ನಿಂದ ದೆಹಲಿಗೆ ಹೊರಡುತ್ತೇವೆ. ನಾವು ದಾರಿಯಲ್ಲಿರುವ ಜನರಿಗೆ ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡುತ್ತೇವೆ. ಕಾರಿನಲ್ಲಿ ಸುಮಾರು 800 ತ್ರಿವರ್ಣ ಧ್ವಜ ಇದೆ. ನನ್ನ ಕಾರು ಜನವರಿ 26ರವರೆಗೆ ಈ ರೀತಿ ಇರುತ್ತದೆ ಎಂದು ತಿಳಿಸಿದರು.