ಸಂಗಾರೆಡ್ಡಿ(ತೆಲಂಗಾಣ):ದೇಶದ ಕೆಲವು ನಗರಗಳಲ್ಲಿ ಮಹಾಮಾರಿ ಕೋವಿಡ್ ಹಾವಳಿ ಕೆಲವು ದಿನಗಳಿಂದ ಮತ್ತೆ ಉಲ್ಬಣಗೊಳ್ಳುತ್ತಿದೆ. ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲಿ ಸಾಮೂಹಿಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮೂರು ದಿನಗಳ ಹಿಂದೆ ಒಡಿಶಾ ಹಾಗು ಕರ್ನಾಟಕದ ಧಾರವಾಡದ ಕಾಲೇಜಿನಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲೂ ವೈರಸ್ ಕಾಣಿಸಿಕೊಂಡಿದೆ.
ತೆಲಂಗಾಣದ ಸಂಗಾರೆಡ್ಡಿಯ ಮುತ್ತಂಗಿ ಗುರುಕುಲದ 42 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನಲ್ಲಿ ಸೋಂಕು ದೃಢಪಟ್ಟಿದೆ. ಈ ಶಾಲೆಯಲ್ಲಿ ಒಟ್ಟು 491 ವಿದ್ಯಾರ್ಥಿನಿಯರು ಹಾಗೂ 27 ಶಿಕ್ಷಕ ಸಿಬ್ಬಂದಿ ಇದ್ದಾರೆ.
ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು, ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಗೊಂಡಿದೆ. ಈ ಬೆನ್ನಲ್ಲೇ ಶಾಲೆಯ 261 ವಿದ್ಯಾರ್ಥಿನಿಯರು ಹಾಗೂ 27 ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 42 ಬಾಲಕಿಯರಲ್ಲಿ ಸೋಂಕು ಇರುವುದು ಖಚಿತಗೊಂಡಿದೆ. ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವರನ್ನೆಲ್ಲಾ ಪ್ರತ್ಯೇಕವಾಗಿ ಇರಿಸಲಾಗಿದ್ದು, ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಗಾಯತ್ರಿ ದೇವಿ ತಿಳಿಸಿದರು.