ಗುರುಗ್ರಾಮ, ಹರಿಯಾಣ:ದೆಹಲಿಯ ಹೊರವಲಯ, ಹರಿಯಾಣದ ಗಡಿ ಪ್ರದೇಶ ಗುರುಗ್ರಾಮದಲ್ಲಿ ಜನರನ್ನು ಭಯಗೊಳಿಸುವ ಕೊಲೆಯೊಂದು ಬೆಳಕಿಗೆ ಬಂದಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಲ್ಕರ್ ಹತ್ಯೆ ರೀತಿಯಲ್ಲೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪತ್ನಿಯನ್ನು ಕೊಂದು ಶವವನ್ನು ಕತ್ತರಿಸಿ ಮತ್ತು ದೇಹದ ಭಾಗಗಳನ್ನು ಬೇರೆಡೆ ಎಸೆದ ಆರೋಪದ ಮೇಲೆ 34 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 21 ರಂದು ಮಾನೇಸರ್‌ನ ಹಳ್ಳಿಯೊಂದರಲ್ಲಿ ಮಹಿಳೆಯ ಅರ್ಧ ಸುಟ್ಟ ಮುಂಡ ಪತ್ತೆಯಾಗಿದ್ದು, ಆಕೆಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ಸುಡಲು ಯತ್ನಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆದ್ರೆ ಮಹಿಳೆಯ ತಲೆ ಮತ್ತು ಕೈಗಳು ಕಾಣೆಯಾಗಿರುವುದನ್ನು ಪೊಲೀಸರು ಗಮನಿಸಿದ್ದರು. ನಂತರ ಪೊಲೀಸರು ಆಕೆಯ ಕೈ ಮತ್ತು ತಲೆಯನ್ನು ಸಹ ಪತ್ತೆ ಮಾಡಿದ್ದರು.
ಪೊಲೀಸರು ಮೃತ ಮಹಿಳೆಯ ಪತಿ ಮೇಲೆ ಅನುಮಾನ ವ್ಯಕ್ತಪಡಿಸಿ ವಶಕ್ಕೆ ಪಡೆಯಲಾಗಿದ್ದು, ಆರೋಪಿ ಪತಿ ಜಿತೇಂದರ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ವಿಚಾರಣೆ ಬಳಿಕ ಶುಕ್ರವಾರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಗುರುಗ್ರಾಮ್ ಪೊಲೀಸ್ ಆಯುಕ್ತ ಕಲಾ ರಾಮಚಂದ್ರನ್ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ಜಿತೇಂದರ್ ಗಾಂಧಿನಗರದ ನಿವಾಸಿಯಾಗಿದ್ದು, ಮನೇಸರ್ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಕುಕ್ಡೋಲಾ ಗ್ರಾಮದ ಉಮೇದ್ ಸಿಂಗ್ ಎಂಬುವರು ಗುತ್ತಿಗೆ ಪಡೆದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಎರಡು ಕೊಠಡಿಗಳಲ್ಲಿ ಒಂದರಿಂದ ಮಹಿಳೆಯ ಶವ ಪತ್ತೆಯಾಗಿದೆ. ಉಮೇದ್ ಸಿಂಗ್ ಅವರು ಪಚಗಾಂವ್ ಚೌಕ್‌ನಿಂದ ಕಸನ್ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಎಂಟು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು.