ಅಹಮದಾಬಾದ್: ಹೆಣ್ಣುಮಕ್ಕಳು ಈ ಹಿಂದೆ 14 ಅಥವಾ 15 ವರ್ಷ ವಯಸ್ಸಿನಲ್ಲೇ ಮದುವೆಯಾಗುತ್ತಿದ್ದರು ಮತ್ತು 17 ವರ್ಷಕ್ಕೆ ತಾಯಂದಿರಾಗುತ್ತಿದ್ದರು ಎಂದು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಮನುಸ್ಮೃತಿಯನ್ನು ಉಲ್ಲೇಖಿಸಿ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದೆ.
ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಏಳು ತಿಂಗಳ ಗರ್ಭವನ್ನು ತೆಗೆದುಹಾಕಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ನಡೆಸಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಮೀರ್ ಜೆಜೆ ದವೆ ಅವರಿದ್ದ ಏಕಸದಸ್ಯ ಪೀಠ, ಈ ಹಿಂದೆ ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17 ವರ್ಷಕ್ಕಿಂತ ಮೊದಲು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು ಎಂದು ಒತ್ತಿ ಹೇಳಿದೆ. ಭ್ರೂಣದಲ್ಲಿ ಅಥವಾ ಬಾಲಕಿಯಲ್ಲಿ ಯಾವುದೇ ಗಂಭೀರ ಕಾಯಿಲೆ ಕಂಡು ಬಂದರೆ, ನ್ಯಾಯಾಲಯವು ಅದನ್ನು ಪರಿಗಣಿಸಬಹುದು, ಹೆಣ್ಣು ಮತ್ತು ಭ್ರೂಣ ಇಬ್ಬರೂ ಆರೋಗ್ಯವಾಗಿದ್ದರೆ, ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಬಾಲಕಿ ಪರ ವಕೀಲರು, ಬಾಲಕಿಗೆ ಆಗಸ್ಟ್ 16 ರಂದು ಹೆರಿಗೆಯಾಗಲಿದ್ದು, ಶೀಘ್ರ ವಿಚಾರಣೆ ನಡೆಸಸುವಂತೆ ವಾದ ಮಂಡಿಸಿದರು. ಆದರೆ ನ್ಯಾಯಮೂರ್ತಿ ಸಮೀರ್ ಜೆಜೆ ದವೆ ಅವರಿದ್ದ ಏಕಸದಸ್ಯ ಪೀಠ, ರಾಜ್‌ಕೋಟ್‌ನ ಆಸ್ಪತ್ರೆಯಿಂದ ವೈದ್ಯಕೀಯ ಅಭಿಪ್ರಾಯ ಕೇಳಿದ್ದು, ವಿಚಾರಣೆಯನ್ನು ಜೂನ್‌ಗೆ ಮುಂದೂಡಿತು. ಬಾಲಕಿ 28 ವಾರಗಳ ಗರ್ಭಿಣಿಯಾಗಿದ್ದಾಳೆ.
ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ದವೆ ಅವರು 16 ವರ್ಷ 11 ತಿಂಗಳ ಬಾಲಕಿ ಜೊತೆ, ತಮ್ಮ ತಾಯಿ ಅಥವಾ ಮುತ್ತಜ್ಜಿ ಅವರು ಚಿಕ್ಕವರಾಗಿದ್ದಾಗ ಮದುವೆಯ ವಯಸ್ಸು ಎಷ್ಟಿತ್ತು ಎಂಬುದರ ಬಗ್ಗೆ ಕೇಳಲು ಹೇಳಿದರು.
"ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿರುವ ಕಾರಣ, ನಿಮ್ಮ ತಾಯಿ ಅಥವಾ ಮುತ್ತಜ್ಜಿಯನ್ನು ಕೇಳಿ. ಅವರಿಗೆ ಗರಿಷ್ಠ 14 ರಿಂದ 15 ವಯಸ್ಸಿನ ಒಳಗೆ ಮದುವೆಯಾಗುತ್ತಿತ್ತು. ಮತ್ತು 17 ವರ್ಷಕ್ಕಿಂತ ಮೊದಲೇ ಮಗುವಿನ ತಾಯಿಯಾಗುತ್ತಿದ್ದರು. ನಾಲ್ಕು ಅಥವಾ ಐದು ತಿಂಗಳ ಅಂತರವು ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ. ನೀವು ಓದಲ್ಲ, ಆದರೆ, ಇದಕ್ಕಾಗಿಯಾದರೂ ಒಂದು ಬಾರಿ ಮನುಸ್ಮೃತಿಯನ್ನು ಓದಿ" ಎಂದು ಹೇಳಿದರು. ಮನುಸ್ಮೃತಿಯು ಮನು ರಚಿಸಿರುವ ಪುರಾತನ ಹಿಂದೂ ಗ್ರಂಥವಾಗಿದ್ದು, ಇದು ಸಾಮಾಜಿಕ ನಡವಳಿಕೆಯ ಕಾನೂನುಗಳು ಮತ್ತು ನಿಯಮಗಳನ್ನು ಒಳಗೊಂಡಿದೆ.