ನವದಹೆಲಿ:ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸಂಸದರೊಂದಿಗೆ ಬುಧವಾರ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳು ಪ್ರತಿಯೊಬ್ಬರಿಗೂ ತಲುಪುವಂತಗಾಬೇಕು. ವಿಶೇಷವಾಗಿ ಬಿಜೆಪಿಯೇತರ ರಾಜ್ಯಗಳಿಗೂ ಕೇಂದ್ರದ ಯೋಜನೆಗಳನ್ನು ತಲುಪಿಸಬೇಕು ಎಂದು ಪ್ರಧಾನಿ ಸಂಸದರಿಗೆ ಸೂಚಿಸಿದರು.
ಬಿಜೆಪಿಯೇತರ ರಾಜ್ಯಗಳಲ್ಲಿ ಅಲ್ಲಿಯ ಆಡಳಿತದ ಸಹಾಯವಿಲ್ಲದೇ ಕೇಂದ್ರ ಸರ್ಕಾರದ ಯೋಜನೆಯ ಸಾರ್ವಜನಿಕರಿಗೆ ತಲುಪಿಸುವುದು ಮುಖ್ಯ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ಬಿಜೆಪಿಯೇತರ ರಾಜ್ಯಗಳ ಜನರೊಂದಿಗೆ ಸಂಪರ್ಕ ಸಾಧಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಚ್ಚಿನ ಗಮನಹರಿಸಬೇಕು. ಎಲ್ಲ ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕರೊಂದಿಗೆ ಆಚರಿಸಿ ಮತ್ತು ಒಗ್ಗಟ್ಟಿನಿಂದಿರಬೇಕು. ಹಾಗೆಯೇ ಮುಂಬರುವ 2024ರ ಲೋಕಸಭಾ ಚುನಾವಣೆಗೆ ಎಲ್ಲರೂ ಸಿದ್ಧರಾಗಿರುವಂತೆ ಪ್ರಧಾನಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷ್ವದೀಪಗಳು ಸೇರಿದಂತೆ ಒಟ್ಟು 48 ಸಂಸದರು ಭಾಗಿಯಾಗಿದ್ದರು. ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ ಮುರಳೀಧರನ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಡಾ.ಕೆ.ಲಕ್ಷ್ಮಣ್, ಜಿ. ಕಿಶನ್ ರೆಡ್ಡಿ, ವನತಿ ಶ್ರೀನಿವಾಸನ್ ಮತ್ತು ಇತರ ಎನ್‌ಡಿಎ ಸಂಸದರು ಸಭೆಯಲ್ಲಿ ಉಪಸ್ಥಿತರಿದ್ದರು.