ಹೈದರಾಬಾದ್(ತೆಲಂಗಾಣ): ನಗರದ ಸರ್ಕಾರಿ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬನ ಬಳಿ ಗಾಂಜಾ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿ ತನ್ನ ಸ್ನೇಹಿತರಿಗೆ ಪ್ಯಾಕೆಟ್ವೊಂದನ್ನು ತೋರಿಸುತ್ತಿರುವುದನ್ನು ಗಮನಿಸಿದ ಶಿಕ್ಷಕ, ಆತನ ಬಳಿಯಿಂದ ಪ್ಯಾಕೆಟ್ ಅನ್ನು ಪಡೆದುಕೊಂಡು ಪರಿಶೀಲಿಸಿ ಅದರಲ್ಲಿ ಗಾಂಜಾ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇನ್ನು ಪೊಲೀಸರು ವಿದ್ಯಾರ್ಥಿಯನ್ನು ವಿಚಾರಣೆಗೊಳಪಡಿಸಿದಾಗ, ತನ್ನ ಕಾಲೋನಿಯಲ್ಲಿರುವ ಯುವಕನೊಬ್ಬ ಗಾಂಜಾ ಇರುವ ಪ್ಯಾಕೆಟ್‌ಗಳನ್ನು ತನ್ನ ಜೇಬಿನಲ್ಲಿಟ್ಟು, ಯಾರಾದರೂ ಬೇಕು ಎಂದು ಕೇಳಿದರೆ ಅವರಿಗೆ ಕೊಡು ಎಂದು ಹೇಳಿರುವುದಾಗಿ ಎಂದು ತಿಳಿಸಿದ್ದಾನೆ. ಗಾಂಜಾವನ್ನು ಓಲ್ಡ್ ಟೌನ್ನಿಂದ ತಂದು ಶಾಲಾ ಮಕ್ಕಳ ಬಳಿ ಅಡಗಿಸಿ ಇಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಮತ್ತೊಂದೆಡೆ, ಸಿಕಂದರಾಬಾದ್ನ ಶಾಲೆಯೊಂದರ ಆರನೇ ತರಗತಿಯಲ್ಲಿ ಓದುತ್ತಿದ್ದ 10 ವಿದ್ಯಾರ್ಥಿಗಳ ಬಳಿ ಸಿಗರೇಟ್ ವಾಸನೆ ಬರುತ್ತಿರುವುದನ್ನು ಗಮನಿಸಿದ ಶಿಕ್ಷಕ, ಅವರ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಗಾಂಜಾ ಮತ್ತು ಕೆಲವು ಮಾತ್ರೆಗಳು ಕಂಡು ಬಂದಿವೆ. ಈ ಬಗ್ಗೆ ಶಿಕ್ಷಕ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ಗಾಂಜಾ ಪೂರೈಕೆಗೆ ಶಾಲಾ ಮಕ್ಕಳ ಬಳಕೆ: ಇತ್ತೀಚೆಗೆ ಹೈದರಾಬಾದ್ನಲ್ಲಿ ಪೊಲೀಸರ ತಪಾಸಣೆ ಮತ್ತು ಬಂಧನಗಳಿಂದ ಭಯಭೀತರಾಗಿರುವ ಮಾದಕ ವಸ್ತು ಕಳ್ಳಸಾಗಣೆದಾರರು ಇವುಗಳನ್ನು ಸಾಗಿಸಲು ಹೊಸ ಮಾರ್ಗಗಳನ್ನು ಹುಡುಕಿಕೊಂಡಿದ್ದು, ಇದಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಾಗಿರುವುದರಿಂದ ಇವರ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಉದ್ದೇಶದಿಂದ ಅವರನ್ನು ಮಾದಕ ವಸ್ತು ಪೂರೈಕೆದಾರರನ್ನಾಗಿ ಪರಿವರ್ತಿಸುತ್ತಿದ್ದಾರೆ.