ಸಲಂಬರ್(ರಾಜಸ್ಥಾನ): ರಾಜ್ಯದಲ್ಲಿ ನೂತನವಾಗಿ ರಚನೆಯಾದ ಸಾಲಂಬರ್ ಜಿಲ್ಲೆಯ ಲಸಾಡಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಒಂದೇ ಕುಟುಂಬದ ನಾಲ್ವರು ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮನೆ ಸಮೀಪದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
"ಲಸಾಡಿಯಾ ಉಪವಿಭಾಗದ ಧಿಕಿಯಾದ ಬೋಡ್ ಫಾಲಾದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ" ಎಂದು ಸಲಂಬರ್ ಡಿಎಸ್‌ಪಿ ದುಂಗರ್ ಸಿಂಗ್ ತಿಳಿಸಿದರು. "ಬೋಡ್ ಫಾಲಾದಲ್ಲಿ ವಾಸಿಸುವ ಉಂಕರ್ ಮೀನಾ ಅವರ ಮನೆಯಲ್ಲಿ ದುರಂತ ಘಟಿಸಿದೆ. ಮನೆಯ ಸಮೀಪವೇ ಇದ್ದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಮನೆಯ ಕಬ್ಬಿಣದ ಗೇಟ್ಗೆ ತಂತಿ ಸ್ಪರ್ಶಿಸಿದೆ. 68 ವರ್ಷದ ಉಂಕರ್ ಮೀನಾ ಅವರಿಗೆ ಕರೆಂಟ್ ತಗುಲಿದ್ದು, ಸಹಾಯಕ್ಕೆ ಧಾವಿಸಿದ ಪತ್ನಿ ಭನ್ವಾರಿ (65) ಅವರಿಗೂ ವಿದ್ಯುತ್ ತಗುಲಿತು. ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಅವರ 25 ವರ್ಷದ ಮಗ ದೇವಿ ಲಾಲ್ ಮತ್ತು 22 ವರ್ಷದ ಮಗಳು ಮಂಗಿಗೆ ಕೂಡ ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡ.. 60 ಕ್ಕೂ ಹೆಚ್ಚು ಮನೆಗಳಲ್ಲಿ ಕತ್ತಲು