ಮಾಲ್ಡಾ (ಪಶ್ಚಿಮ ಬಂಗಾಳ): ವರದಕ್ಷಿಣೆ ಕಾರಣಕ್ಕಾಗಿ ಅತ್ತೆಯೇ ತನ್ನ ವಂಶದ ಕುಡಿಯನ್ನು ಹೊತ್ತಿದ್ದ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಸಜೀವ ದಹನ ಮಾಡಿರುವ ಅಮಾನುಷ ಘಟನೆ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ಏಳು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮಹಿಳೆ ಸೋಮವಾರ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದ್ದಾಳೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ರಬಿದಾಸ್(23) ಎಂದು ಗುರುತಿಸಲಾಗಿದ್ದು, ರುತುವಾ ಬ್ಲಾಕ್ 2ರ ಸಂಬಲ್ಪುರ ಗ್ರಾಮ ಪಂಚಾಯತ್ನ ಅಜಿಮ್ಗಂಜ್ ಗ್ರಾಮದಲ್ಲಿ ನಡೆದಿದೆ. ಮಹಿಳೆ ಸಾವಿನ ಬಳಿಕ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಬಳಿಕ ಮಹಿಳೆಯ ಪತಿ, ಅತ್ತೆ ಹಾಗೂ ಮಾವ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿ, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಸ್ಥಳೀಯ ಹಾಗೂ ಪೊಲೀಸ್ ಮೂಲಗಳ ಪ್ರಕಾರ, ಅಜಿಮ್ಗಂಜ್ ಗ್ರಾಮದ ನಿವಾಸಿ ರಾಜ್ಕುಮಾರ್ ರಬಿದಾಸ್ ವೃತ್ತಿಯಲ್ಲಿ ಕ್ಷೌರಿಕ. ರಬಿದಾಸ್ ಮಗಳು ಪ್ರಿಯಾಂಕಾ ಅದೇ ಗ್ರಾಮದ ಅಕಲು ರಬಿದಾಸ್ ಎಂಬವನನ್ನು ಪ್ರೀತಿಸಿ, ಮದುವೆಯಾಗಿದ್ದಳು. ಮನೆಯವರು ಇವರಿಬ್ಬರ ಪ್ರೀತಿಯನ್ನು ಒಪ್ಪಿದ್ದು, ಅಕಲು ಹಾಗೂ ಪ್ರಿಯಾಂಕಾ ಮನೆಯವರು ಒಪ್ಪಿಗೆಯಲ್ಲಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಪ್ರೀತಿಸಿ ಮದುವೆಯಾಗಿದ್ದರೂ, ಮದುವೆ ಸಮಯದಲ್ಲಿ ರಾಜ್ಕುಮಾರ್ ರಬಿದಾಸ್ ಅಳಿಯನಿಗೆ ತಮ್ಮ ಕೈಲಾದಷ್ಟು ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಆದರೆ ಮದುವೆ ಬಳಿಕವೂ ಅಕಲು ಹಾಗೂ ಆತನ ಕುಟುಂಬ ಪ್ರಿಯಾಂಕಾಗೆ ಹೆಚ್ಚಿನ ಹಣ ತೆಗೆದುಕೊಂಡು ಬರುವಂತೆ ಬೇಡಿಕೆಯಿಡಲು ಪ್ರಾರಂಭಿಸಿತ್ತು. ಹಣ ತರದೇ ಇದ್ದ ಪ್ರಿಯಾಂಕಾಗೆ ಕೆಲವೊಮ್ಮೆ ಥಳಿಸವುದನ್ನೂ ಮಾಡುತ್ತಿದ್ದರು. ಮಗಳ ಕಷ್ಟವನ್ನು ನೋಡಿದ ತಂದೆ ಕೆಲವೊಮ್ಮೆ ಅಳಿಯನಿಗೆ ಸ್ವಲ್ಪ ಹಣ ನೀಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಅಕಲು ಹಾಗೂ ಆತನ ಕುಟುಂಬ ಪ್ರಿಯಾಂಕಾ ಬಳಿ ತಂದೆ ಮನೆಯಿಂದ 1 ಲಕ್ಷ ರೂಪಾಯಿ ತರುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಅಷ್ಟು ಮೊತ್ತದ ಹಣವನ್ನು ರಾಜ್ಕುಮಾರ್ ಅವರು ಅಳಿಯನಿಗೆ ನೀಡಲು ಸಾಧ್ಯವಾಗಿಲ್ಲ.
ಹೀಗಾಗಿ ಪ್ರಿಯಾಂಕಾಗೆ ಅತ್ತೆ ಮನೆಯಲ್ಲಿ ಹೆಚ್ಚು ಕಿರುಕುಳ ಕೊಡಲು ಪ್ರಾರಂಭಿಸಿದ್ದರು. ಸೊಸೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಸಹ ಅತ್ತೆ ಮಾತ್ರ ಆಕೆಗೆ ಚಿತ್ರಹಿಂಸೆ ಕೊಡುವುದನ್ನು ನಿಲ್ಲಿಸಿರಲಿಲ್ಲ. ಆಗಸ್ಟ್ 1 ರಂದು ರಾತ್ರಿ ಚಿತ್ರಹಿಂಸೆ ಅತಿಯಾಗಿ ಅಕಲು ಹಾಗೂ ಆತನ ಕುಟುಂಬ ಪ್ರಿಯಾಂಕಾಗೆ ತೀವ್ರವಾಗಿ ಥಳಿಸಿ, ಬೆಂಕಿ ಹಚ್ಚಿದ್ದರು. ಪ್ರಿಯಾಂಕಾ ಕಿರುಚಾಟಕ್ಕೆ ನೆರೆಹೊರೆಯವರು ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ. ಸುದ್ದಿ ತಿಳಿದು ಪ್ರಿಯಾಂಕಾ ಕುಟುಂಬಸ್ಥರೂ ದೌಡಾಯಿಸಿದ್ದು, ತಕ್ಷಣ ಆಕೆಯನ್ನು ಮಾಲ್ಡಾ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಒಂದು ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಾಂಕಾ ಸಾವನ್ನಪ್ಪಿದ್ದಾಳೆ. ಮಗಳ ಸಾವಿನ ಬಳಿಕ ತಂದೆ ರಾಜ್ ಕುಮಾರ್ ರಬಿದಾಸ್ ಪುಖುರಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಅಳಿಯ ಮತ್ತು ಅವರ ಕುಟುಂಬದ ಸದಸ್ಯರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಲಿಖಿತ ದೂರು ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟ ತಾಯಿಯ ಮರ್ಡರ್.. ಆಸ್ತಿಗಾಗಿ ಪತ್ನಿಯೊಂದಿಗೆ ಸೇರಿ ಹೆತ್ತಮ್ಮನನ್ನೇ ಕೊಂದ ಪುತ್ರ: ಮಗ ಸೊಸೆ ಅರೆಸ್ಟ್