ನವದೆಹಲಿ :ರಾಜಕೀಯ ಪುನಶ್ಚೇತನಕ್ಕಾಗಿ ಕಾಂಗ್ರೆಸ್ ಮೂರು ದಿನಗಳ ಚಿಂತನಾ ಶಿಬಿರ ನಡೆಸುತ್ತಿದೆ. ಈ ನಡುವೆ ಪಂಜಾಬ್ನ ಹಿರಿಯ ನಾಯಕ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ನಡೆದ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ತಲೆ ಬಿಸಿ ಆಗುವಂತೆ ಮಾಡಿದೆ.
ಮೂರು ಬಾರಿ ಶಾಸಕ ಮತ್ತು ಒಮ್ಮೆ ಸಂಸದರಾಗಿ ಹಾಗೂ ಪಂಜಾಬ್ನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ 68 ವರ್ಷದ ಸುನಿಲ್ ಜಾಖರ್, ಶನಿವಾರ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪಕ್ಷದ ಹೆಸರು ತೆಗೆದು ಹಾಕಿದ್ಧಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷದ ಧ್ವಜದ ಬದಲಿಗೆ ತ್ರಿವರ್ಣ ಧ್ವಜವನ್ನು ತಮ್ಮ ಟ್ವಿಟರ್‌ಗೆ ಹಾಕಿದ್ದಾರೆ. ಜೊತೆಗೆ 'ದಿಲ್ ಕಿ ಬಾತ್' ಶೀರ್ಷಿಕೆಯಡಿ ಫೇಸ್‌ಬುಕ್ ಲೈವ್ನಲ್ಲಿ ಬಂದು 'ಗುಡ್‌ಬೈ ಮತ್ತು ಗುಡ್‌ಲಕ್ ಕಾಂಗ್ರೆಸ್' ಎಂದು ಪಕ್ಷಕ್ಕೆ ವಿದಾಯ ಘೋಷಿಸಿದ್ದಾರೆ.
ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಕಾರಣ ಎಂದು ಸುನಿಲ್ ಜಾಖರ್ ಹೇಳಿದ್ದರು. ಸಂದರ್ಶನವೊಂದರಲ್ಲಿ ದಲಿತರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರಿಂದ ಕಾಂಗ್ರೆಸ್ನ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು.
ನೋಟಿಸ್ ಜಾರಿ ಮಾಡಿದ್ದ 'ಕೈ' :ಚನ್ನಿ ಬಗ್ಗೆ ಟೀಕೆ ಸೇರಿದಂತೆ ಪಂಜಾಬ್ನ ಕೆಲ ಕಾಂಗ್ರೆಸ್ ನಾಯಕರು ಸುನಿಲ್ ಜಾಖರ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಮಾಡಿದ್ದರು. ಅಂತೆಯೇ ಕಾಂಗ್ರೆಸ್ ಶಿಸ್ತು ಸಮಿತಿಯು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದು ಹಾಕಿತ್ತು. ಇದರಿಂದ ನಾನು ನಾನು ಎದೆಗುಂದಿದ್ದೇನೆ ಎಂದು ಜಾಖರ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೊಗಳಿರುವ ಅವರು, ಹೊಗಳುಭಟ್ಟರಿಂದ ದೂರು ಇರುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.
ಮೃದುಧೋರಣೆ ಹೊಂದಿದ್ದ ಸೋನಿಯಾ :ಸುನಿಲ್ ಜಾಖರ್ಗೆ ಕಾಂಗ್ರೆಸ್ ಶಿಸ್ತು ಸಮಿತಿಯು ಎರಡು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆಯೂ ಶಿಫಾರಸು ಮಾಡಿತ್ತು. ಆದರೆ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಲಿ, ಹೈಕಮಾಂಡ್ ಆಗಲಿ ಎಂದು ಸುನಿಲ್ ಜಾಖರ್ ವಿರುದ್ಧ ಇದುವರೆಗೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಅಲ್ಲದೇ, ಸೋನಿಯಾ ಗಾಂಧಿ ಜಾಖರ್ ಬಗ್ಗೆ ವೃದುಧೋರಣೆ ಹೊಂದಿದ್ದರು ಎನ್ನಲಾಗಿದೆ.
ಇತ್ತ, ಜಾಖರ್ ಕಾಂಗ್ರೆಸ್ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಮತ್ತೊಬ್ಬ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಸುನಿಲ್ ಜಾಖರ್ ಅವರನ್ನು ಕಳೆದುಕೊಳ್ಳಬಾರದು, ಅವರು ಚಿನ್ನದಂತೆ ಸಂಪತ್ತು. ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಪರಿಹರಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಅಮೃತಸರ್ ಗುರು ನಾನಕ್ ದೇವ್ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ದುರಂತ