ನವದೆಹಲಿ :ಹಿಜಾಬ್ ಹಾಕಿಕೊಂಡು ಶಾಲಾ-ಕಾಲೇಜ್ಗಳಿಗೆ ಹೋಗುವುದಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧವನ್ನ ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಅನೇಕ ರಾಜಕೀಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ ಹಿಜಾಬ್ ತೀರ್ಪಿನ ಕುರಿತು ಮಾತನಾಡಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ವಾನುಮತದ ತೀರ್ಪು ಹೊರ ಬಂದಿದೆ. ರಾಜ್ಯ ಸರ್ಕಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಪರಸ್ಪರ ಚರ್ಚೆ ನಡೆಸಬೇಕು. ತೀರ್ಪಿನಿಂದ ಸಮಸ್ಯೆ ಬಗೆಹರಿದಿಲ್ಲ, ಅದು ಮತ್ತಷ್ಟು ಉಲ್ಬಣಗೊಂಡಿದೆ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ:ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನ್ ಸಂಬಂಧ ಅನ್ನೋದೇ ಅರ್ಥವಾಗ್ತಿಲ್ಲ.. ಹಿಜಾಬ್ ಬಗ್ಗೆ ಸಿಎಂ ಕೆಸಿಆರ್ ಮಾತು
ಇದೇ ವಿಚಾರವಾಗಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶ್ರೀನಗರದಲ್ಲಿ ಮಾತನಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ನಿರಾಸೆಯಾಗಿದೆ ಎಂದಿರುವ ಅವರು, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನಾವು, ಅವರ ಸರಳ ಆಯ್ಕೆಯ ಹಕ್ಕು ನಿರಾಕರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಈ ತೀರ್ಪಿನ ಬಗ್ಗೆ ಒಮರ್ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿದ್ದು, ಮಹಿಳೆ ಏನು ಧರಿಸಬೇಕು ಎಂಬ ಆಯ್ಕೆ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಅಪಹಾಸ್ಯವಾಗಿದೆ ಎಂದಿದ್ದಾರೆ.
ಕಳೆದ ಜನವರಿ ತಿಂಗಳಿಂದಲೂ ಹಿಜಾಬ್ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು.
ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಆರಂಭವಾಗಿದ್ದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿತ್ತು. ಇಂದು ಕರ್ನಾಟಕ ಹೈಕೋರ್ಟ್ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ.