ಕೊಟ್ಟಾಯಂ (ಕೇರಳ): ಸಾಮಾನ್ಯವಾಗಿ ಒಬ್ಬ ಜನನಾಯಕ ಮರಣ ಹೊಂದಿದಾಗ ಆತನ ದೇಹವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸಮಾಧಿ ಮಾಡಲಾಗುತ್ತದೆ. ಆದರೆ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಕೊನೆಯ ಇಚ್ಛೆಯಂತೆ ನಿನ್ನೆ (ಜುಲೈ 20) ಯಾವುದೇ ಸರ್ಕಾರಿ ಗೌರವವಿಲ್ಲದೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪುತ್ತುಪ್ಪಲ್ಲಿಯಲ್ಲಿ ಸೇಂಟ್ ಜಾರ್ಜ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿರುವ ವಿಶೇಷ ಸಮಾಧಿಯಲ್ಲಿ ಅಗಲಿದ ಮಾಜಿ ಸಿಎಂ ಅವರ ಅಂತಿಮ ವಿಧಿವಿಧಾನಗಳು ನಡೆದವು. ರಾಹುಲ್ ಗಾಂಧಿ, ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು, ರಾಜ್ಯ ಸಚಿವರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಅಂತಿಮ ದರ್ಶನಕ್ಕೆ ಸಾವಿರಾರು ಜನ: ಇದಕ್ಕೂ ಮುನ್ನ ಪಾರ್ಥಿವ ಶರೀರಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ್ ಬೋಸ್, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ರಾಜ್ಯದ ವಿವಿಧ ಸಚಿವರು, ನಟರಾದ ಮಮ್ಮುಟ್ಟಿ ಮತ್ತು ಸುರೇಶ್ ಗೋಪಿ, ಧಾರ್ಮಿಕ ಮುಖಂಡರು ಮತ್ತು ಸಾವಿರಾರು ಮಂದಿ ತಿರುನಕ್ಕರ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಿದರು.
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜುಲೈ 18 ರಂದು ಬೆಂಗಳೂರಿನ ಚಿನ್ಮಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ನಂತರ ಅವರ ಪಾರ್ಥಿವ ಶರೀರವನ್ನು ಕೊಟ್ಟಾಯಂ ತಿರುನಕ್ಕರ್ಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಆ ಬಳಿಕ ಗುರುವಾರ ಮಧ್ಯಾಹ್ನ ಪಾರ್ಥಿವ ಶರೀರವನ್ನು ಹುಟ್ಟೂರಾದ ಪುತ್ತುಪಲ್ಲಿಗೆ ಜನಸಂದಣಿಯ ಮಧ್ಯೆ ಕರೆದೊಯ್ಯಲಾಯಿತು. ಕಾಂಗ್ರೆಸ್ ಮುಖಂಡರು, ಸ್ಥಳೀಯರು, ಸಂಬಂಧಿಕರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು. ಮೃತರು ಪತ್ನಿ ಮರಿಯಮ್ಮ ಉಮ್ಮನ್, ಮೂವರು ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ :ಕೇರಳದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ನಿಧನ; ಗಣ್ಯರ ಸಂತಾಪ
ಉಮ್ಮನ್ ಚಾಂಡಿ ಕುರಿತು..:ಅಕ್ಟೋಬರ್ 31, 1943ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕಟ್ ಎಂಬಲ್ಲಿ ಜನಿಸಿದ ಉಮ್ಮನ್ ಚಾಂಡಿ ಅವರು ಬಳಿಕ ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಹೈಸ್ಕೂಲ್, ಕೊಟ್ಟಾಯಂ ಸಿಎಂಎಸ್ ಕಾಲೇಜಿನಲ್ಲಿ ಪಿಯುಸಿ, ಚಂಗನಾಶ್ಶೇರಿ ಎಸ್ ಬಿ ಕಾಲೇಜಿನಲ್ಲಿ ಬಿಎ ಮತ್ತು ಎರ್ನಾಕುಲಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡರು. ವಿದ್ಯಾರ್ಥಿ ಒಕ್ಕೂಟದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಅವರು 1967ರಲ್ಲಿ ಕೇರಳ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದರು. 1969ರಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಹಾಗೆಯೇ, 1970ರಲ್ಲಿ ಪುದುಪಲ್ಲಿಯಿಂದ ಚುನಾವಣೆಗೆ ಸ್ಪರ್ಧಿಸಿ ತಮ್ಮ 27ನೇ ವಯಸ್ಸಿಗೆ ಪ್ರಥಮ ಬಾರಿಗೆ ಶಾಸಕರಾದರು. 1970ರಿಂದ 2021ರವರೆಗೂ ಪುದುಪಲ್ಲಿ ಕ್ಷೇತ್ರವೊಂದರಿಂದಲೇ ಸತತವಾಗಿ 12 ಬಾರಿ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ನಾಲ್ಕು ಬಾರಿ ಸಚಿವರಾಗಿದ್ದರು.