ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟದಲ್ಲಿನ ಕುಸಿತ ಮತ್ತು ಉಸಿರಾಟದ ತೊಂದರೆಯಿಂದಾಗಿ, ಅವರು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಅಲಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಅವರಲ್ಲಿ ಆಮ್ಲಜನಕದ ಮಟ್ಟವು ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ತಕ್ಷಣವೇ ಬ್ಯಾಲಿಗಂಜ್‌ನ ಪಾಮ್ ಅವೆನ್ಯೂನಲ್ಲಿರುವ ಅವರ ನಿವಾಸದಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಮಯದಲ್ಲಿ ಅವರನ್ನು ತೀವ್ರ ವೈದ್ಯಕೀಯ ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ.
ರಕ್ತದಲ್ಲಿನ ಆಮ್ಲಜನಕದ ಮಟ್ಟ ಇಳಿಕೆ:ಶನಿವಾರ ಬೆಳಗ್ಗೆ ಬುದ್ಧದೇಬ್ ಭಟ್ಟಾಚಾರ್ಯ ಅವರ ಆರೋಗ್ಯ ಹದಗೆಡಲು ಆರಂಭಿಸಿದೆ ಎಂದು ಆಸ್ಪತ್ರೆಯ ಮೂಲಗಳು ಬಹಿರಂಗಪಡಿಸಿವೆ. ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಕಡಿಮೆಯಾಗಲು ಪ್ರಾರಂಭಿಸಿತು, ವೈದ್ಯರು ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದರು. ಪಾಮ್ ಅವೆನ್ಯೂದಲ್ಲಿನ ಅವರ ನಿವಾಸದಿಂದ ಅಲಿಪುರದ ಆಸ್ಪತ್ರೆಗೆ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ತ್ವರಿತವಾಗಿ ಕರೆದೊಯ್ಯಲಾಯಿತು. ಅವರನ್ನು ಸಾಗಿಸುವ ಸಮಯದಲ್ಲಿ, ಅವರ ದೈಹಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಅಲಿಪುರದ ಖಾಸಗಿ ಆಸ್ಪತ್ರೆಯಿಂದ ಕ್ರಿಟಿಕಲ್ ಕೇರ್ ಆಂಬ್ಯುಲೆನ್ಸ್ ಅನ್ನು ಕಳುಹಿಸುವ ಅಗತ್ಯವಿತ್ತು. ಆದರೆ, ಈ ಎಲ್ಲ ವಿವರಗಳನ್ನು ಆಸ್ಪತ್ರೆಯ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.
ಭಟ್ಟಾಚಾರ್ಯ ಅವರು ದೀರ್ಘಕಾಲದ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ತಡೆಯುವ ಉಸಿರಾಟದ ಸ್ಥಿತಿಯಾಗಿದೆ. ದುರದೃಷ್ಟವಶಾತ್, ಅವರು 2021ರಲ್ಲಿ COVID-19 ಸೋಂಕಿಗೆ ಒಳಗಾದಾಗ ಅವರ ಆರೋಗ್ಯದ ತೊಂದರೆಗಳು ಉಲ್ಬಣಗೊಂಡಿದ್ದವು. ಮೇ 18, 2021 ರಂದು, COVID-19 ಸೋಂಕಿನಿಂದಾಗಿ ಅವರು ಕ್ವಾರಂಟೈನ್‌ನಲ್ಲಿದ್ದರು. ಅವರ ಸ್ಥಿತಿ ಹದಗೆಟ್ಟಿದ್ದರಿಂದ, ಅದೇ ವರ್ಷ ಮೇ 25 ರಂದು ಅವರನ್ನು ಅಲಿಪುರದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅವರನ್ನು ಜೂನ್ 2, 2021 ರಂದು ಅಲಿಪುರ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ನಂತರ ಸಿಐಟಿ ರಸ್ತೆಯಲ್ಲಿರುವ ನರ್ಸಿಂಗ್ ಹೋಮ್‌ನಲ್ಲಿ ಆರೈಕೆ ಪಡೆದರು.