ಕೋಲ್ಕತ್ತಾ:ಉತ್ತರ ಸಿಕ್ಕಿಂನಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಮೇಘಸ್ಪೋಟದಿಂದ ತೀಸ್ತಾ ನದಿಯಲ್ಲಿ ಪ್ರವಾಹ ಉಂಟಾಗಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ತೀಸ್ತಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ಇದವರೆಗೂ 10 ಜನರು ಮೃತಪಟ್ಟಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ. 23 ಸೇನಾ ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಸಿಬ್ಬಂದಿ ಪತ್ತೆ ಕಾರ್ಯ ಮುಂದುವರೆದಿದೆ.
ಕೇವಲ ಸಿಕ್ಕಿಂ ಮಾತ್ರವಲ್ಲದೇ ಇದರೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲೂ ಪ್ರವಾಹದ ದಿಗಿಲು ಎದುರಾಗಿದೆ. ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗಗಳ ಒಂಬತ್ತು ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಿ 190 ಸುರಕ್ಷಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಧ್ಯ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬ್ಯಾನರ್ಜಿ ತಮ್ಮ ನಿವಾಸದಿಂದಲೆ ಪರಿಸ್ಥಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜತೆಗೆ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಕ್ರಮದ ಭಾಗವಾಗಿ ರಾಜ್ಯದ ಸರ್ಕಾರಿ ಅಧಿಕಾರಿಗಳ ರಜೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ. ಕೂಡಲೇ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಸಿಎಂ ಬ್ಯಾನರ್ಜಿ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಈಗಾಗಲೆ ತಗ್ಗು ಪ್ರದೇಶಗಳಿಂದ 10,000 ಜನರನ್ನು ರಕ್ಷಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.