ನವದೆಹಲಿ: ಕೇಂದ್ರ ಸರ್ಕಾರವು ಮೆಗಾ ಹೈಸ್ಪೀಡ್ ರೈಲು ಸಂಪರ್ಕಕ್ಕಾಗಿ ಅನೇಕ ಯೋಜನೆಗಳನ್ನು ಘೋಷಿಸಿದೆ. ಆದರೆ, ಸವಿವರವಾದ ಯೋಜನಾ ವರದಿ (ಡಿಪಿಆರ್) ನೀಡಿದ ಹಿನ್ನೆಲೆ ರೈಲ್ವೆ ಸಚಿವಾಲಯವು ಏಳು ಹೈಸ್ಪೀಡ್ ರೈಲು (ಎಚ್‌ಎಸ್‌ಆರ್) ಕಾರಿಡಾರ್‌ಗಳನ್ನು ಇನ್ನೂ ಮಂಜೂರು ಮಾಡಿಲ್ಲ. ಪ್ರಸ್ತುತ, ಮುಂಬೈ - ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಯೋಜನೆಯು ಜಪಾನ್ ಸರ್ಕಾರದ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ಕಾರ್ಯಗತಗೊಳ್ಳುತ್ತಿರುವ ದೇಶದ ಏಕೈಕ ಅತಿವೇಗದ ರೈಲು ಯೋಜನೆಯಾಗಿದೆ.
"ರೈಲ್ವೆ ಸಚಿವಾಲಯವು ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಎನ್‌ಹೆಚ್‌ಎಸ್‌ಆರ್‌ಸಿಎಲ್) ವಹಿಸಿದ್ದರೂ ಕೂಡ ಅವರು ಇನ್ನೂ ವರದಿ ಸಲ್ಲಿಸಿಲ್ಲ. ದೆಹಲಿ-ವಾರಣಾಸಿ ಹೈಸ್ಪೀಡ್ ರೈಲಿನ ಡಿಪಿಆರ್ ಅನ್ನು ಅಂತಿಮಗೊಳಿಸಿ, ಅದನ್ನು ರೈಲ್ವೆ ಸಚಿವಾಲಯಕ್ಕೆ ಎನ್‌ಹೆಚ್‌ಎಸ್‌ಆರ್‌ಸಿಎಲ್ ಸಲ್ಲಿಸಿದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು 'ಈಟಿವಿ ಭಾರತ್'ಕ್ಕೆ ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ :ರೈಲ್ವೆ ಬೋಗಿಯಲ್ಲಿ ಶೌಚಾಲಯಕ್ಕೆ ತೆರಳಿದ್ದ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಸಾವು
"ಯಾವುದೇ HSR ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡುವ ನಿರ್ಧಾರವು DPR ಫಲಿತಾಂಶ, ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆ, ಸಂಪನ್ಮೂಲಗಳ ಲಭ್ಯತೆ ಮತ್ತು ಹಣಕಾಸು ಆಯ್ಕೆಗಳಂತಹ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಸದ್ಯಕ್ಕೆ ದೆಹಲಿ-ವಾರಣಾಸಿ, ದೆಹಲಿ-ಅಹಮದಾಬಾದ್, ದೆಹಲಿ-ಅಮೃತಸರ, ಮುಂಬೈ-ನಾಗ್ಪುರ, ಮುಂಬೈ-ಪುಣೆ-ಹೈದರಾಬಾದ್, ಚೆನ್ನೈ-ಬೆಂಗಳೂರು-ಮೈಸೂರು ಮತ್ತು ವಾರಣಾಸಿ-ಹೌರಾಗಳ ಡಿಪಿಆರ್ ಅಧ್ಯಯನ ವಿವಿಧ ಹಂತಗಳಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.