ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳನ್ನ ವಾಪಸ್ ಪಡೆದುಕೊಂಡ ಬಳಿಕ ಕೂಡ ಕೇಂದ್ರದ ವಿರುದ್ಧ ಪ್ರತಿಭಟನೆ ಮುಂದುವರೆಸಿರುವ ರೈತ ಸಂಘಟನೆಗಳು ತಮ್ಮ ಹೋರಾಟವನ್ನ ಇಂದು ಅಂತ್ಯಗೊಳಿಸುವ ಸಾಧ್ಯತೆ ಇದೆ. ರೈತರ ಎಲ್ಲ ಷರತ್ತುಗಳಿಗೆ ಮೋದಿ ಸರ್ಕಾರ ಈಗಾಗಲೇ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ರೈತ ಸಂಘಟನೆಗಳ ಮಹತ್ವದ ಸಭೆ ನಡೆಯಲಿದ್ದು, ಇಲ್ಲಿ ಪ್ರತಿಭಟನೆ ಹಿಂಪಡೆದುಕೊಳ್ಳುವ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಕೇಂದ್ರ ಸರ್ಕಾರದಿಂದ ಎಲ್ಲ ಷರತ್ತು ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದ ಬಳಿಕವೇ ತಮ್ಮ ಪ್ರತಿಭಟನೆ ಹಿಂಪಡೆದುಕೊಳ್ಳಲು ರೈತ ಸಂಘಟನೆಗಳು ಮುಂದಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆ ವಿರುದ್ಧ ಅನ್ನದಾತರು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ಒಂದು ವರ್ಷದಿಂದ ನಿರಂತರವಾಗಿ ಈ ಹೋರಾಟ ಮುಂದುವರೆದಿದೆ. ಇದರ ಮಧ್ಯೆ, ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಳ್ಳುವುದಕ್ಕೂ ಸ್ವಲ್ಪ ದಿನ ಮುಂಚಿತವಾಗಿ ವಿವಾದಿತ ಕೃಷಿ ಕಾನೂನು ವಾಪಸ್ ಪಡೆದುಕೊಳ್ಳುವುದಾಗಿ ಕೇಂದ್ರ ಘೋಷಣೆ ಮಾಡಿತ್ತು. ಇದಾದ ಬಳಿಕ ಕೂಡ ರೈತ ಸಂಘಟನೆಗಳು, ಕನಿಷ್ಠ ಬೆಂಬಲ ಬೆಲೆ ಘೋಷಣೆ, ರೈತರ ಮೇಲಿನ ಎಫ್ಐಆರ್ ಸೇರಿದಂತೆ ಅನೇಕ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು.