ಕರ್ನಾಲ್ (ಹರಿಯಾಣ):ಕಳೆದ ಆಗಸ್ಟ್ 28ರಂದು ಕರ್ನಾಲ್ನಲ್ಲಿ ರೈತರ ಮೇಲೆ ನಡೆದಿದ್ದ ಲಾಠಿ ಚಾರ್ಜ್ ಪ್ರಕರಣ ಸಂಬಂಧ ರೈತರ ಬೇಡಿಕೆಗೆ ಕೊನೆಗೂ ಹರಿಯಾಣ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆ ಅಂದು ರೈತರ ಮೇಲೆ ಲಾಠಿ ಚಾರ್ಜ್ಗೆ ಆದೇಶ ನೀಡಿದ್ದ ಐಎಎಸ್ ಅಧಿಕಾರಿ ಆಯೂಷ್ ಸಿನ್ಹಾ ಅವರನ್ನ ರಜೆಯ ಮೇಲೆ ಕಳುಹಿಸಿದೆ.
ಆಗಸ್ಟ್ 28ರಂದು ಕರ್ನಾಲ್ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಓರ್ವ ರೈತ ಮೃತಪಟ್ಟು ಹಲವು ರೈತರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಇದನ್ನು ವಿರೋಧಿಸಿ ರೈತರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದರು.
ಈ ಘಟನೆ ಸಂಬಂಧ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರೈತ ನಾಯಕ ಗುರ್ನಾಮ್ ಚದುನಿ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆಯಾಗಬೇಕು. ಒಂದು ತಿಂಗಳೊಳಗೆ ಈ ತನಿಖೆ ಮುಗಿಯಬೇಕು. ಅಲ್ಲದೆ ಕರ್ನಾಲ್ನ ಮಾಜಿ ಉಪ ಜಿಲ್ಲಾಧಿಕಾರಿ ಸಿನ್ಹಾ ತನಿಖೆ ಮುಗಿಯುವರೆಗೂ ರಜೆ ಮೇಲೆ ತೆರಳಬೇಕು ಎಂದು ಆಗ್ರಹಿಸಿದ್ದರು.