ನವದೆಹಲಿ: ಹಿಂದೂಗಳ ಪವಿತ್ರ ಹಬ್ಬ ದೀಪಾವಳಿಯನ್ನು ಫ್ಯಾಬ್ ಇಂಡಿಯಾ ಕಂಪನಿಯು ತನ್ನ ಹೊಸ ಜಾಹೀರಾತಿನಲ್ಲಿ ಜಶ್ನ್-ಇ-ರಿವಾಜ್ (Jashn-e-Riwaaz) ಎಂದು ಬಿಂಬಿಸಿದೆ. ಇದಕ್ಕೆ ಆನ್‌ಲೈನ್ ಮೂಲಕ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ವಸ್ತ್ರ ಮಾರಾಟ ಕಂಪನಿಯು ದೀಪಾವಳಿಯನ್ನು ಹೊಸ ಹೆಸರಿನಲ್ಲಿ ಕರೆಯುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿತ್ತು. ಇದೇ ವೇಳೆ, ಅನೇಕರು ಕಂಪನಿಯು ಅನವಶ್ಯಕವಾಗಿ ಮುಸ್ಲಿಂ ಸಿದ್ಧಾಂತಗಳು ಮತ್ತು ಜಾತ್ಯತೀತತೆಯನ್ನು ಎಳೆದು ತರುತ್ತಿದೆ ಎಂದು ಟೀಕಿಸಿದ್ದರು.
ಫ್ಯಾಬ್ ಇಂಡಿಯಾ ಟ್ವೀಟ್ ಹೇಳಿದ್ದೇನು?
ದೀಪಾವಳಿ ಸಂದರ್ಭದಲ್ಲಿ ಫ್ಯಾಬ್ ಇಂಡಿಯಾ ತನ್ನ ಹೊಸ ಸರಕುಗಳನ್ನು ಗ್ರಾಹಕರ ಬಳಿಗೆ ಕೊಂಡೊಯ್ಯಲು ಸಿದ್ಧಪಡಿಸಿದ ಜಾಹೀರಾತಿನಲ್ಲಿ ಮಾಡೆಲ್‌ಗಳು ಹೊಸ ಮಾದರಿಯ ವಸ್ತ್ರಗಳಲ್ಲಿ ಕಾಣುತ್ತಾರೆ. ಇದಕ್ಕೆ ಕ್ಯಾಪ್ಶನ್ ಕೊಟ್ಟಿರುವ ಕಂಪನಿಯು, 'ಫ್ಯಾಬ್ ಇಂಡಿಯಾ ಜಶ್ನ್-ಇ-ರಿವಾಜ್ ಮೂಲಕ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಿದೆ. ಈ ಸಂದರ್ಭದಲ್ಲಿ ಸಿದ್ಧಪಡಿಸಿರುವ ಹೊಸ ಸಂಗ್ರಹವು ಭಾರತೀಯ ಸಂಸ್ಕೃತಿಗೆ ವಿಶೇಷ ಗೌರವ ಸಲ್ಲಿಸುತ್ತದೆ' ಎಂದು ಹೇಳಿತ್ತು.
ಈ ಬೆಳವಣಿಗೆಯ ನಂತರ ಟ್ವಿಟರ್‌ನಲ್ಲಿ 'ಬಾಯ್ಕಾಟ್ ಫ್ಯಾಬ್ ಇಂಡಿಯಾ' ಟ್ರೆಂಡ್ ಆಗಿದ್ದು ನೆಟ್ಟಿಗರು ಟೀಕೆಗಳ ಸುರಿಮಳೆಯನ್ನೇ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಕಂಪನಿಯು ಜಾಹೀರಾತು ಹೊಂದಿದ್ದ ಟ್ವೀಟ್ ಡಿಲೀಟ್ ಮಾಡಿದೆ.