ಹೈದರಾಬಾದ್: ಜುಲೈ 19 ರಿಂದ ಆರಂಭವಾದ ರಾಜ್ಯಸಭೆ, ಲೋಕಸಭೆ ಮುಂಗಾರು ಅಧಿವೇಶನವು ಎರಡು ದಿನ ಮೊದಲೇ ಮುಕ್ತಾಯಗೊಂಡಿದೆ. ಈ ಬಾರಿಯ ಅಧಿವೇಶನಗಳಲ್ಲಿ ಪೆಗಾಸಸ್ ಗೂಢಚರ್ಯೆ ಆರೋಪದ ತನಿಖೆಗೆ ಒತ್ತಾಯ, ಕೃಷಿ ಕಾನೂನುಗಳು ಹಾಗೂ ಬೆಲೆ ಏರಿಕೆ ಕುರಿತಂತೆ ಚರ್ಚಿಸಲು ಮೋದಿ ಸರ್ಕಾರ ಅನುಮತಿ ನೀಡದ ಕಾರಣ ಉಭಯ ಸದನಗಳು ಪ್ರಕ್ಷುಬ್ಧ ದೃಶ್ಯಗಳಿಗೆ ಸಾಕ್ಷಿಯಾದವು.
ಅಧಿವೇಶನ ನಡೆದ 17 ದಿನಗಳಲ್ಲಿಯೂ ವಿಪಕ್ಷಗಳು ಈ ಮೇಲಿನ ವಿಚಾರಗಳ ಬಗ್ಗೆಯೇ ಚರ್ಚಿಸಲು ಒತ್ತಾಯಿಸಿದ್ದರಿಂದ ಕೆಲ ಪ್ರಮುಖ ಮಸೂದೆಗಳನ್ನು ವಿಪಕ್ಷಗಳ ಅನುಮತಿ ಇಲ್ಲದೆಯೇ ಕೇಂದ್ರ ಸರ್ಕಾರ ಅಂಗೀಕರಿಸಿತು.
ನಿನ್ನೆ (ಆಗಸ್ಟ್ 11) ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಪ್ರತಾಪ ಸಿಂಹ ಬಾಜ್ವಾ ಚರ್ಚೆಯೊಂದರ ವೇಳೆ ಮೇಜಿನ ಮೇಲೆ ಹತ್ತಿ ನಿಯಮದ ಪುಸ್ತಕ ಎಸೆದು ದಾಂಧಲೆ ಸೃಷ್ಟಿಸಿದರು. ಈ ಸಮಯದಲ್ಲಿ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಭಾವುಕರಾದರು. ಸಂಸತ್ತು ಪ್ರಜಾಪ್ರಭುತ್ವದ ದೇಗುಲ, ಇದರ ಪವಿತ್ರತೆಯನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ಪ್ರತಿ ಗಂಟೆ ಅಧಿವೇಶನ ನಡೆಸಲು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ರೂ, ಯಾವುದೇ ಪ್ರಯೋಜನವಾಗಿಲ್ಲ. ಪಿಆರ್‌ಎಸ್ ಶಾಸಕಾಂಗ ಸಂಶೋಧನಾ ಮಾಹಿತಿಯ ಪ್ರಕಾರ, ಮುಂಗಾರು ಅಧಿವೇಶನವು ಕಳೆದ ಎರಡು ದಶಕಗಳಲ್ಲಿ ಅತ್ಯಂತ ಕಡಿಮೆ ಸಮಯ ನಡೆದ ನಾಲ್ಕನೇ ಅಧಿವೇಶನ ಇದಾಗಿದೆ. ಲೋಕಸಭೆಯು ದಿನಕ್ಕೆ ಆರು ಗಂಟೆಗಳಂತೆ 19 ದಿನಗಳವರೆಗೆ ಅಧಿವೇಶನ ನಡೆಸಬೇಕಿತ್ತು.
ಆದರೆ, ಕೇವಲ 21 ಗಂಟೆಗಳು ಮಾತ್ರ ಕಲಾಪ ನಡೆದಿದೆ. ರಾಜ್ಯಸಭೆಯ 19 ದಿನಗಳಲ್ಲಿ 112 ಗಂಟೆಗಳ ಕಾಲ ಸಭೆ ಸೇರಬೇಕಿತ್ತು. ಆದ್ರೆ, ಕೇವಲ 29 ಗಂಟೆಗಳವರೆಗೆ ಮಾತ್ರ ಚರ್ಚೆ ನಡೆದಿದೆ. ಲೋಕಸಭೆಯು ಯಾವುದೇ ಶಾಸಕಾಂಗವಲ್ಲದ ವಿಷಯವನ್ನು ಚರ್ಚಿಸಿಲ್ಲ ಅನ್ನೋದು ಬೇಸರದ ಸಂಗತಿ.
ಇದನ್ನೂ ಓದಿ: 'ಮಸೂದೆ ಮಂಡನೆ ವೇಳೆ ಬೆದರಿಕೆ'... ಸುದ್ದಿಗೋಷ್ಠಿ ನಡೆಸಿ ವಿಪಕ್ಷಗಳ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವರು!
ಪಿಆರ್‌ಎಸ್ ಶಾಸಕಾಂಗ ಸಂಶೋಧನಾ ದತ್ತಾಂಶಗಳ ಪ್ರಕಾರ, ಕೋವಿಡ್ ಹಾಗೂ ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್ಗಾಗಿ ಎಲ್ಲಾ ಪಕ್ಷಗಳು ಚರ್ಚಿಸಿ ಕೇವಲ 9 ನಿಮಿಷದಲ್ಲಿ 15,750 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡಲಾಯಿತು. ರಾಜ್ಯಸಭೆಯು ಇದೊಂದು ಪ್ರಮುಖ ಚರ್ಚೆಯನ್ನು ಹೊಂದಿತ್ತು. ಅದನ್ನು ಹೊರತುಪಡಿಸಿ ಇನ್ಯಾವುದೇ ಚರ್ಚೆಯೇ ನಡೆದಿಲ್ಲ. ಇಷ್ಟರ ಮಧ್ಯೆ ಕೆಲ ಪ್ರಮುಖ ಮಸೂದೆಗಳು ಯಾವುದೇ ಚರ್ಚೆ ಇಲ್ಲದೇ ಮಂಡನೆ ಆಗಿ ಅನುಮೋದನೆ ಪಡೆದಿವೆ. ಲೋಕಸಭೆಯು ನಿಗದಿತ ಸಮಯದ ಶೇ. 35 ಮತ್ತು ರಾಜ್ಯಸಭೆಯು ಶೇ. 25 ರಷ್ಟು ಪ್ರಶ್ನಾವಳೆ ವೇಳೆಯಲ್ಲಿ ಕಾರ್ಯ ನಿರ್ವಹಿಸಿತು.