ರಾಜ್ಕೋಟ್ (ಗುಜರಾತ್): ವಂಶಪಾರಂಪರ್ಯ ರಾಜಕೀಯದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀಕೃಷ್ಣನಿಗೆ ಕರ್ನಾಟಕದ ಮಾಜಿ ರಾಜ್ಯಪಾಲ ಮತ್ತು ಹಿರಿಯ ಬಿಜೆಪಿ ನಾಯಕ ವಜುಭಾಯಿ ವಾಲಾ ಹೋಲಿಕೆ ಮಾಡಿದ್ದಾರೆ. ಮಹಾಭಾರತದ ಸಮಯದಲ್ಲಿ ಶ್ರೀಕೃಷ್ಣ ಏಕಪಕ್ಷೀಯತೆಯ ವಿರುದ್ಧ ಹೋರಾಡುತ್ತಿದ್ದರು. ಪ್ರಸ್ತುತ ಕಾಲದಲ್ಲಿ ಸ್ವಜನಪಕ್ಷಪಾತದ ವಿರುದ್ಧ ಪ್ರಧಾನಿ ಮೋದಿ ಅವರೂ ಹೋರಾಡುತ್ತಿದ್ದಾರೆ ಎಂದು ಹೇಳಿದರು
ರಾಜ್‌ಕೋಟ್‌ನಲ್ಲಿ ಇಂದು ನಡೆದ ಧರ್ಮ ಸಭೆಯನ್ನುದ್ದೇಶಿಸಿ ವಾಲಾ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕೆಂಪುಕೋಟೆಯಲ್ಲಿ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ಪರಿವಾರ ರಾಜಕೀಯದ ವಿರುದ್ಧ ನಾವು ಹೋರಾಡಬೇಕೆಂಬ ಹೇಳಿಕೆಯನ್ನು ಉಲ್ಲೇಖಿಸಿ ಈ ಅಭಿಪ್ರಾಯಿಸಿದರು.
ಜೊತೆಗೆ ಗುಜರಾತ್ನ ವಿಧಾನಸಭೆಯ ಎಲ್ಲ 182 ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಆದರೆ, ಇದು ಭಾರತೀಯ ಜನತಾ ಪಕ್ಷಕ್ಕೆ ಅಸಾಧ್ಯವಲ್ಲ. ಪಕ್ಷದ ಬದ್ಧತೆ ಮತ್ತು ಚುನಾವಣೆಯಲ್ಲಿ ಹೋರಾಡುವ ಸಂಕಲ್ಪದೊಂದಿಗೆ 182 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದರು.
ಅಷ್ಟೇ ಅಲ್ಲ, ಗುಜರಾತ್ ಚುನಾವಣೆಗೆ ಆಮ್ ಆದ್ಮಿ ಪಕ್ಷ ಪ್ರವೇಶಿಸಿದ್ದರೂ ಬಿಜೆಪಿಗೆ ಯಾವುದೇ ಹಾನಿಯಾಗಲ್ಲ. ರಾಜ್ಯ ಚುನಾವಣಾ ಅಖಾಡಕ್ಕೆ ಮೂರನೇ ಅಥವಾ ನಾಲ್ಕನೇ ಮತ್ತು ಐದನೇ ಅಂಗ ಬಂದರೂ ಬಿಜೆಪಿಯೇ ಗೆಲ್ಲುತ್ತದೆ. ಯಾವ ಪಕ್ಷ, ಯಾವ ರೀತಿಯ ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿ ಜನರ ಹಿತಕ್ಕಾಗಿ ಬದ್ಧವಾಗಿದ್ದು, ಅದಕ್ಕಾಗಿಯೇ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ವಾಲಾ ಹೇಳಿದರು.
ಮೋದಿ ಏನು ಹೇಳಿದ್ದರು?:ದೇಶದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದ್ದರು. ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶ ಇದರ ವಿರುದ್ಧ ಹೋರಾಡಬೇಕು. ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕೆಂದು ಅವರು ಕರೆ ನೀಡಿದ್ದರು.
ಈ ವೇಳೆ ಕುಟುಂಬ ರಾಜಕಾರಣವನ್ನೂ ಟೀಕಿಸಿದ್ದ ಮೋದಿ, ಪರಿವಾರವಾದವು ಕೇವಲ ರಾಜಕೀಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ನಮ್ಮ ಅನೇಕ ಸಂಸ್ಥೆಗಳು ಕೂಡ ಕುಟುಂಬ ರಾಜಕೀಯದ ಪರಿಣಾಮ ಎದುರಿಸುತ್ತಿವೆ. ಪರಿವಾರವಾದವು ನಿಜವಾದ ಪ್ರತಿಭೆಗಳು ಮತ್ತ ರಾಷ್ಟ್ರದ ಸಾಮರ್ಥ್ಯಕ್ಕೆ ಹಾನಿ ಮಾಡುತ್ತಿವೆ. ಇದು ಭ್ರಷ್ಟಾಚಾರ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಎಚ್ಚರಿಸಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರ, ವಂಶ ರಾಜಕೀಯದ ಪ್ರಶ್ನೆಗೆ ನೋ ಕಮೆಂಟ್ಸ್ ಎಂದ ರಾಹುಲ್ ಗಾಂಧಿ