ಕೋಲ್ಕತಾ :ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಜಗದೀಪ್ ಧಾಂಕರ್ ಅಧಿಕಾರ ವಹಿಸಿಕೊಂಡ ಆರಂಭದಿಂದಲೇ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಅವರ ಮಧ್ಯೆ ವಾಕ್ಸಮರದ ಸರಣಿ ಆರಂಭವಾಗಿತ್ತು.
ಆದರೆ, ಇದೀಗ ವಿಧಾನಸಭಾ ಚುನಾವಣೆ ಮುಗಿದು ಮತ್ತೊಮ್ಮೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ನಂತರ ಇಬ್ಬರ ಮಧ್ಯೆ ಕದನ ವಿರಾಮವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಈ ನಿರೀಕ್ಷೆಗಳು ಹುಸಿಯಾಗಿವೆ. ಇಬ್ಬರ ನಡುವಿನ ವಾಗ್ಯುದ್ಧ ಮುಂದುವರೆದಿದೆ. ಚುನಾವಣೆಯ ನಂತರ ರಾಜ್ಯದೆಲ್ಲೆಡೆ ಹಿಂಸಾಚಾರಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರದ ವಿರುದ್ಧ ಮತ್ತಷ್ಟು ಪ್ರಖರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಸಹಜವಾಗಿಯೇ ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕಣ್ಣು ಕೆಂಪಗಾಗಿಸಿದೆ.
ಹಿಂಸಾಚಾರದಿಂದ ನಲುಗಿರುವ ಕೂಚ್ ಬೆಹಾರ್ ಜಿಲ್ಲೆಗೆ ಗುರುವಾರ ಬೆಳಗ್ಗೆ ತಲುಪಿದ ರಾಜ್ಯಪಾಲ ಧಾಂಕರ್ ಸಿಟಾಲಕುಚಿ, ದಿನ್ಹಾಟಾ ಮತ್ತು ಸಿತಾಯ್ ಪ್ರದೇಶಗಳಿಗೆ ಭೇಟಿ ಖುದ್ದಾಗಿ ಪರಿಸ್ಥಿತಿಯನ್ನು ಅವಲೋಕಿಸಿದರು. ಕೂಚ್ ಬೆಹಾರ್ ಬಿಜೆಪಿ ಸಂಸದ ನಿಸಿಥ್ ಪ್ರಾಮಾಣಿಕ ರಾಜ್ಯಪಾಲರ ಜೊತೆಗೆ ಇದ್ದರು.
ಈ ಮಧ್ಯೆ ಹಿಂಸಾ ಪೀಡಿತ ಹಲವಾರು ಪ್ರದೇಶಗಳ ಮೂಲಕ ತೆರಳುವ ಮಾರ್ಗದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರಿಗೆ ಕಪ್ಪು ಬಾವುಟ ತೋರಿಸಿ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ ಘಟನೆಗಳು ನಡೆದವು.
ಟಿಎಂಸಿ ಕಾರ್ಯಕರ್ತರ ಪ್ರತಿಭಟನೆಗಳಿಂದ ಕೋಪಗೊಂಡ ರಾಜ್ಯಪಾಲ ಧಾಂಕರ್ ಒಂದು ಹಂತದಲ್ಲಿ ಕಾರಿನಿಂದಿಳಿದು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ರನ್ನು ತರಾಟೆಗೆ ತೆಗೆದುಕೊಂಡರು.