ಆನೆಗಳು ಮನುಷ್ಯರ ಜೊತೆ ಪ್ರೀತಿಯಿಂದ ವರ್ತಿಸುವುದನ್ನು ನಾವು ಆಗಾಗ ನೋಡುತ್ತೇವೆ. ಆನೆಗಳು ತಮ್ಮ ಯಜಮಾನನ ಪ್ರಾಣ ಉಳಿಸುವ, ಮನುಷ್ಯರು ಅವುಗಳೊಂದಿಗೆ ಪ್ರೀತಿ, ಸಲುಗೆಯಿಂದ ವರ್ತಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಆನೆಯೊಂದು ಬಾಲಕಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಅವರು, "ಯಾರು ಉತ್ತಮವಾಗಿ ನೃತ್ಯ ಮಾಡಿದರು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ "ಇಬ್ಬರ ನೃತ್ಯವೂ ಚೆನ್ನಾಗಿದೆ," ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ಧಾರೆ.
ಈ ವೈರಲ್ ಕ್ಲಿಪ್‌ನಲ್ಲಿ, ಹುಡುಗಿಯೊಬ್ಬಳು ಆನೆಯ ಮುಂದೆ ನಿಂತು ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಅಚ್ಚರಿಯೆಂದರೆ ಆ ಬಾಲಕಿ ಡ್ಯಾನ್ಸ್ ಮಾಡಿದ್ದನ್ನು ಕಂಡು ಆನೆಯೂ ಕೂಡ ಆ ನೃತ್ಯಕ್ಕೆ ತಕ್ಕಂತೆ ತನ್ನ ತಲೆ ಮತ್ತು ಅಗಲವಾದ ಕಿವಿಗಳನ್ನು ಅಲ್ಲಾಡಿಸುತ್ತಾ ಆ ಹುಡುಗಿಯನ್ನು ಅನುಕರಿಸಲು ಪ್ರಾರಂಭಿಸುತ್ತದೆ.
ಈ ಕ್ಷಣವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ತಮಗಾದ ಸಂತೋಷವನ್ನು ಕಾಮೆಂಟ್‌ಗಳ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. "ಇದು ಅದ್ಭುತವಾಗಿದೆ ಮತ್ತು ತುಂಬಾ ಸುಂದರವಾಗಿದೆ. ತುಂಬಾ ಮುದ್ದಾಗಿದೆ. ಮನಸ್ಸಿಗೆ ಮುದ ನೀಡುತ್ತದೆ" ಎಂದು ಬಳಕೆದಾರರು ಹೇಳಿದ್ದಾರೆ.