ಹೈದರಾಬಾದ್:ಇಂದು ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆ ಬಿಗಿ ಭದ್ರತಾ ಕೈಗೊಳ್ಳಲಾಗಿದೆ. ಮತ ಎಣಿಕೆಗೆ ಮುನ್ನ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯ ಪೊಲೀಸರು, ತ್ರಿಪುರಾ ರಾಜ್ಯ ರೈಫಲ್ಸ್ (ಟಿಎಸ್‌ಆರ್) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿವೆ. ಗಸ್ತು ತಿರುಗುವಿಕೆ, ಪ್ರತಿಬಂಡಾಯ ಕಾರ್ಯಾಚರಣೆಗಳು ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನೆರವಿನೊಂದಿಗೆ ಗಡಿಭಾಗದಲ್ಲಿರುವ ಹೊರ ಠಾಣೆಗಳನ್ನು ಬಲಪಡಿಸಲಾಗುತ್ತಿದೆ. ಚುನಾವಣಾ ಪೂರ್ವ ಹಿಂಸಾಚಾರ ಮತ್ತು ಭುಗಿಲೆದ್ದದ್ದನ್ನು ಕಡಿಮೆಗೊಳಿಸಲಾಗಿದ್ದರೂ, ಚುನಾವಣೆಯ ನಂತರದ ಹಂತವು ವಿವಿಧ ಪ್ರಕರಣಗಳಲ್ಲಿ 22 ಎಫ್‌ಐಆರ್‌ಗಳು ದಾಖಲಾಗಿದ್ದವು. ಒಟ್ಟು 20 ಜನರು ಗಾಯಗೊಂಡಿದ್ದು, ಒಬ್ಬರು ಮೃತಪಟ್ಟಿದ್ದರು.
ತ್ರಿಪುರಾದಲ್ಲಿ ಪೊಲೀಸ್ ಸರ್ಪಗಾವಲು: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ದುರ್ಬಲತೆಯನ್ನು ಪರಿಗಣಿಸಿ, ಪೊಲೀಸ್ ಮಹಾನಿರ್ದೇಶಕ ಅಮಿತಾಭ ರಂಜನ್ ಅವರು, ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶಾಂತಿಯುತ ಎಣಿಕೆ ಪ್ರಕ್ರಿಯೆ ಮತ್ತು ನಂತರದ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ದೈನಂದಿನ ಆಧಾರದ ಮೇಲೆ ಸೂಚನೆಗಳನ್ನು ನೀಡುತ್ತಿದ್ದಾರೆ.
ರಾಜಕೀಯ ಪಕ್ಷಗಳ ಸಂಘಟಕರು, ಮುಖಂಡರು, ಅಭ್ಯರ್ಥಿಗಳು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮತ್ತು ಸ್ಥಳೀಯ ಆಡಳಿತ ಮತ್ತು ಪೊಲೀಸರೊಂದಿಗೆ ಸಂಪರ್ಕದಲ್ಲಿರಲು ಖಡಕ್ ಸೂಚನೆ ನೀಡಿದ್ದಾರೆ. ಸಂಚಾರಿ ಗಸ್ತು ತಿರುಗುವಿಕೆ ಕಾರ್ಯವನ್ನು ಸಿಎಪಿಎಫ್, ಟಿಎಸ್‌ಆರ್ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ನಡೆಸುತ್ತಿದ್ದಾರೆ. ವಿಶೇಷವಾಗಿ ಹಿಂಸಾಚಾರದ ಬೆದರಿಕೆ ಇರುವ ಪ್ರದೇಶಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪೊಲೀಸ್ ಹದ್ದಿನ ಕಣ್ಣು:ಅಗರ್ತಲಾ ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ವಾಹನ ಮತ್ತು ಹೋಟೆಲ್ ತಪಾಸಣೆ, ಮದ್ಯ ವಿರೋಧಿ ಕಾರ್ಯಾಚರಣೆ ಮತ್ತು ಕೆಲವು ಕಡೆಗಳಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಎಣಿಕೆ ಕೇಂದ್ರಗಳಿಗೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಮತ್ತು ಸ್ಟ್ರಾಂಗ್ ರೂಂ ನಿರ್ವಹಣೆಗಾಗಿ 24x7 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.