ಅಕೋಲಾ:ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕೇವಲ ಎಂಟು ತಿಂಗಳ ಹೆಣ್ಣು ಮಗುವಿಗೆ ಹೆಚ್‌ಐವಿ ತಗುಲಿರುವುದು ದೃಢಪಟ್ಟಿದ್ದು, ಬ್ಲಡ್ ಬ್ಯಾಂಕ್ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಮಗುವಿನ ಸಂಬಂಧಿಕರು ಆರೋಗ್ಯ ಸಚಿವ ರಾಜೇಶ್ ತೋಪೆ ಅವರಿಗೆ ದೂರು ನೀಡಿದ್ದಾರೆ.
ಬ್ಲಡ್ ಬ್ಯಾಂಕ್ ಎಡವಟ್ಟಿನಿಂದಾಗಿ ಮಗುವಿಗೆ ಸೋಂಕುಳ್ಳ ರಕ್ತವನ್ನು ನೀಡಲಾಗಿದೆ ಎಂದು ಆರೋಪಿಸಿರುವ ಸಂಬಂಧಿಕರು, ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹೆಚ್‌ಐವಿ ಸೋಂಕಿತ ಕೋವಿಡ್ ರೋಗಿಗಳ ಅಪಾಯದ ಪ್ರಮಾಣ ಹೆಚ್ಚು: ಡಬ್ಲ್ಯೂಹೆಚ್ಒ
ಹುಟ್ಟಿದ ಮೂರು ದಿನಗಳ ಬಳಿಕ ಮಗುವಿನ ಆರೋಗ್ಯ ಹದಗೆಟ್ಟಿತ್ತು. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರಕ್ತ ಕಣಗಳು ಕಡಿಮೆ ಇರುವುದು ಕಂಡು ಬಂದಿತ್ತು. ಹೀಗಾಗಿ ಶಿಶುವೈದ್ಯರ ಸಲಹೆ ಮೇರೆಗೆ ಅಕೋಲಾದ ಬಿಪಿ ಠಾಕ್ರೆ ಬ್ಲಡ್ ಬ್ಯಾಂಕ್ನಿಂದ ಪಡೆದ ರಕ್ತವನ್ನು ಮಗುವಿಗೆ ನೀಡಲಾಗಿತ್ತು.
ರಕ್ತ ಪಡೆದ ಬಳಿಕ ಮಗುವಿಗೆ ಪದೇ ಪದೇ ಜ್ವರ ಬರುತ್ತಿತ್ತು. ಅಮರಾವತಿಯ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಹೆಚ್‌ಐವಿ ತಗುಲಿರುವುದು ತಿಳಿದುಬಂದಿದೆ. ಇತ್ತ ಮಗುವಿನ ಪೋಷಕರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ರಕ್ತನಿಧಿ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದಾಗ ರಕ್ತದಾನ ಮಾಡಿದ್ದ ವ್ಯಕ್ತಿ ಹೆಚ್‌ಐವಿ ಪಾಸಿಟಿವ್ ಆಗಿದ್ದನು ಎಂಬುದು ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.