ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತಮಿಳುನಾಡಿನಾದ್ಯಂತ 36 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಮತ್ತು ಉದಯನಿಧಿ ಸ್ಟಾಲಿನ್ ಫೌಂಡೇಶನ್ನ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದ 34.7 ಲಕ್ಷ ರೂ.ಗಳನ್ನು ಜಪ್ತಿ ಮಾಡಿರುವುದಾಗಿ ಇಡಿ (ಜಾರಿ ನಿರ್ದೇಶನಾಲಯ) ಶನಿವಾರ ತಿಳಿಸಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ವಿವಿಧ ಸೆಕ್ಷನ್‌ಗಳ ಅಡಿ ತನಿಖೆ ನಡೆಸಲಾಗುತ್ತಿದ್ದು, ಕಲ್ಲಾಲ್ ಗ್ರೂಪ್ ಮತ್ತು ಯುಕೆ ಮೂಲದ ಲೈಕಾ ಗ್ರೂಪ್ ಮತ್ತು ಅದರ ಭಾರತೀಯ ಕಂಪನಿಗಳಾದ ಲೈಕಾ ಪ್ರೊಡಕ್ಷನ್ಸ್, ಲೈಕಾ ಹೋಟೆಲ್ಸ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಇಡಿ ಇತ್ತೀಚೆಗೆ ಏಪ್ರಿಲ್ ಮತ್ತು ಈ ತಿಂಗಳ ಆರಂಭದಲ್ಲಿ ಎರಡು ಸಂಸ್ಥೆಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು.
ಚೆನ್ನೈನ ಸೆಂಟ್ರಲ್ ಕ್ರೈಂ ಬ್ರಾಂಚ್ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ತನಿಖೆಯನ್ನು ನಡೆಸಲಾಗುತ್ತಿದೆ. ಪೆಟ್ಟಿಗೋ ಕಮರ್ಷಿಯೋ ಇಂಟರ್‌ನ್ಯಾಷನಲ್ ಎಲ್‌ಡಿಎಯ ನಿರ್ದೇಶಕ ಹಾಗೂ ದೂರುದಾರ ಗೌರವ್ ಚಚ್ರಾ ಅವರಿಗೆ ಕಲ್ಲಲ್ ಗ್ರೂಪ್ ಮತ್ತು ಅದರ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಶರವಣನ್ ಪಳನಿಯಪ್ಪನ್, ವಿಜಯಕುಮಾರನ್, ಅರವಿಂದ್ ರಾಜ್ ಮತ್ತು ವಿಜಯ್ ಅನಂತ್, ಲಕ್ಷ್ಮಿ ಮುತ್ತುರಾಮನ್ ಮತ್ತು ಪ್ರೀತಾ ವಿಜಯಾನಂದ್ ಅವರು 114.37 ಕೋಟಿ ರೂ. ವಂಚಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಪೆಟ್ಟಿಗೋ ಯುಕೆ ಮೂಲದ ಲೈಕಾ ಗ್ರೂಪ್ನ ಅಂಗಸಂಸ್ಥೆಯಾಗಿದ್ದು, ಭಾರತದಲ್ಲಿ ಲೈಕಾ ಪ್ರೊಡಕ್ಷನ್ಸ್, ಲೈಕಾ ಹೋಟೆಲ್‌ಗಳನ್ನು ನಡೆಸುತ್ತಿದೆ. ಲೈಕಾ ಗ್ರೂಪ್ ಮತ್ತು ಅದರ ಘಟಕಗಳಿಗೆ ಯಾವುದೇ ಆಧಾರವಿಲ್ಲದೇ ಅನೈತಿಕವಾಗಿ ಹೂಡಿಕೆಗಳು ಮತ್ತು ಸಾಲಗಳನ್ನು ನೀಡಿದ್ದರಿಂದ ವಂಚನೆ ವಾಸ್ತವವಾಗಿ 300 ಕೋಟಿ ರೂ.ಗಳ ಗಡಿ ದಾಟಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.