ಪಾಟ್ನಾ:ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಬುಧವಾರ ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 187 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ 6E-2074 ವಿಮಾನ ಜಯ ಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ಅವರು ತಿಳಿಸಿದ್ದಾರೆ.
"ಪಾಟ್ನಾ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.58 ಗಂಟೆಗೆ ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ, ಕೆಲ ತಾಂತ್ರಿಕ ದೋಷವಿರುವುದರಿಂದ ಪ್ರಯಾಣದ ಮಧ್ಯದಲ್ಲೇ ಹಿಂತಿರುವುಗುವಂತೆ ಏರ್ ಟ್ರಾಫಿಕ್ ಕಟ್ರೋಲರ್ (ATC) ಪೈಲಟ್ಗೆ ತಿಳಿಸಿದ್ದಾರೆ. ಹಾಗಾಗಿ ವಿಮಾನ ಮತ್ತೆ ಪಾಟ್ನಾ ನಿಲ್ದಾಣಕ್ಕೆ ವಾಪಸ್ ಆಗಿದೆ. ಬಳಿಕ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ" ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕ ಅಂಚಲ್ ಪ್ರಕಾಶ್ ತಿಳಿಸಿದ್ದಾರೆ.