ಧರ್ಮಪುರಿ(ತಮಿಳುನಾಡು): ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತಮ್ಮ ಎರಡು ಮಕ್ಕಳೊಂದಿಗೆ ಅರೂರು ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದರು. ಇವರನ್ನು ಸಾರ್ವಜನಿಕರ ನೆರವಿನಿಂದ ಪೊಲೀಸ್ ಇಲಾಖೆ ರಕ್ಷಿಸಿದೆ. ಆರೂರು ಸಮೀಪದ ಕೀರಪಟ್ಟಿ ಗ್ರಾಮದ ಇಂದಿರಾ ನಗರದ ಪ್ರಶಾಂತ್ ಎಂಬುವವರ ಪತ್ನಿ ಗೀತಾ. ಈ ದಂಪತಿಗೆ ಮೊದಲು ಗಂಡು ಮಗು ಜನಿಸಿದೆ. ಬಳಿಕ ಪತಿ ಪ್ರಶಾಂತ್ ಹಾಗೂ ಆತನ ಪೋಷಕರು ಗೀತಾಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಗೀತಾ ಅವರು ಸುಮಾರು 2 ವರ್ಷಗಳ ಹಿಂದೆ ಈ ಬಗ್ಗೆ ಆರೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಪೊಲೀಸರು ಗೀತಾ ಮತ್ತು ಶಿಶುವನ್ನು ಆಕೆಯ ತಾಯಿಯ ಮನೆಗೆ ಕಳುಹಿಸಿದ್ದರು. ಕೆಲವು ತಿಂಗಳ ನಂತರ ಪ್ರಶಾಂತ್ ಪತ್ನಿ ಗೀತಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದನಂತೆ. ಕಳೆದ 20 ದಿನಗಳ ಹಿಂದೆ ಗೀತಾ 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಬಳಿಕ ಪ್ರಶಾಂತ್ನ ಪೋಷಕರು "ವರದಕ್ಷಿಣೆ ಕೊಟ್ಟರೆ ಮಾತ್ರ ಗಂಡನೊಂದಿಗೆ ಬಾಳಬಹುದು" ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾರೆ.
ಈ ಹಿನ್ನೆಲೆ ಗೀತಾ ಮತ್ತೊಮ್ಮೆ ಆರೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಗೀತಾ ತನ್ನ ಇಬ್ಬರು ಮಕ್ಕಳೊಂದಿಗೆ ಅರೂರ್ ಬಸ್ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದರು. ಇದನ್ನು ಕಂಡ ಸಾರ್ವಜನಿಕರು ಆಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದರು.