ಹೈದರಾಬಾದ್:ವೈದ್ಯೋ ನಾರಾಯಣ ಹರಿಃ ಎನ್ನುವ ಮಾತಿದೆ. ಅನೇಕ ಸಂದರ್ಭಗಳಲ್ಲಿ ವೈದ್ಯರು ತಮ್ಮ ಪ್ರಾಣ ಮುಡಿಪಾಗಿಟ್ಟು ರೋಗಿಗಳ ಪ್ರಾಣ ಉಳಿಸಿರುವ ನಿದರ್ಶನಗಳಿವೆ. ಆದರೆ, ತೆಲಂಗಾಣದಲ್ಲಿ ಇದಕ್ಕೆ ತದ್ವಿರುದ್ಧವಾಗಿರುವ ಘಟನೆವೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ನಾಗರ್ಕರ್ನೂಲ್ ಜಿಲ್ಲೆಯ ಅಚಂಪೇಟ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಪ್ರಕರಣ ನಡೆದಿದ್ದು, ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಗರ್ಭಿಣಿಯೋರ್ವರಿಗೆ ಕೋವಿಡ್-19 ದೃಢಪಟ್ಟಿರುವ ಕಾರಣ ಆಸ್ಪತ್ರೆಯೊಳಗೆ ದಾಖಲು ಮಾಡಿಕೊಳ್ಳಲು ವೈದ್ಯರು ನಿರಾಕರಣೆ ಮಾಡಿದ್ದಾರೆ. ಹೀಗಾಗಿ, ಆಸ್ಪತ್ರೆ ಹೊರಗಿನ ರಸ್ತೆಯಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು, ಆಸ್ಪತ್ರೆಗೆ ಬಂದ ಗರ್ಭಿಣಿಯನ್ನ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಇದೇ ಕಾರಣಕ್ಕಾಗಿ ಬೇರೆ ಆರೋಗ್ಯ ಕೇಂದ್ರಕ್ಕೆ ಹೋಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆ ಆಗಿದೆ. ಇದಾದ ಬಳಿಕ ಆಕೆಯನ್ನ ಒಳಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.