ಚೆನ್ನೈ (ತಮಿಳುನಾಡು): ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ ವಿರುದ್ಧ ನಿಂದನಾತ್ಮಕ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿದ್ದ ಕಾರಣಕ್ಕಾಗಿ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸಿದೆ. ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದ ಎಲ್ಲ ಹುದ್ದೆಗಳು ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಶನಿವಾರ ಅಮಾನತುಗೊಳಿಸಿ ಆದೇಶಿಸಲಾಗಿದೆ.
ತಮಿಳುನಾಡಿನಲ್ಲಿ ರಾಜ್ಯಪಾಲ ಆರ್ಎನ್ ರವಿ ಮತ್ತು ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಜನವರಿ 9ರಂದು ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲವು ಭಾಗಗಳನ್ನು ಬಿಟ್ಟು ಓದಿದ್ದರು. ತಮ್ಮದೇ ಆದ ಕೆಲವು ಅಂಶಗಳನ್ನು ಸೇರಿಸಿ ಭಾಷಣ ಮಾಡಿದ್ದರು. ನಂತರ ರಾಜ್ಯಪಾಲರು ಸದನದಿಂದ ಹೊರ ನಡೆದಿದ್ದರು. ಇದೇ ವಿಷಯವಾಗಿ ರಾಜ್ಯಪಾಲರ ವಿರುದ್ಧ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕರಾದ ಶಿವಾಜಿ ಕೃಷ್ಣಮೂರ್ತಿ ಟೀಕೆಗಳನ್ನು ಮಾಡಿದ್ದರು.
ಡಿಎಂಕೆ ಪಕ್ಷದ ಶಿಸ್ತು ಉಲ್ಲಂಘಿಸಿದ ಮತ್ತು ಪಕ್ಷಕ್ಕೆ ಅಪಖ್ಯಾತಿ ತಂದಿರುವ ಕಾರಣಕ್ಕಾಗಿ ಪಕ್ಷದ ವಾಗ್ಮಿಯಾಗಿರುವ ಶಿವಾಜಿ ಕೃಷ್ಣಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಸಚಿವ ದುರೈಮುರುಗನ್ ಪ್ರಕಟಣೆ ಹೊರಡಿಸಿದ್ದಾರೆ. ಆದರೆ, ರಾಜ್ಯಪಾಲರ ವಿರುದ್ಧ ಶಿವಾಜಿ ಕೃಷ್ಣಮೂರ್ತಿ ನೀಡಿದ್ದ ನಿಂದನೀಯ ಹೇಳಿಕೆಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.
ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಎರಡು ದೂರು: ರಾಜ್ಯಪಾಲ ರವಿ ಅವರನ್ನು ಗುರಿಯಾಗಿಸಿಕೊಂಡು ನಿಂದನೀಯ ಮತ್ತು ಬೆದರಿಕೆಯ ಭಾಷಣಕ್ಕಾಗಿ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ಎರಡು ಪ್ರತ್ಯೇಕ ದೂರುಗಳು ಸಲ್ಲಿಕೆಯಾಗಿವೆ. ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಸ್ವತಃ ರಾಜಭವನದ ಅಧಿಕಾರಿಗಳೇ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಮತ್ತೊಂದೆಡೆ ಬಿಜೆಪಿಯ ರಾಜ್ಯ ಘಟಕದಿಂದಲೂ ಪೊಲೀಸರಿಗೆ ದೂರು ಕೊಡಲಾಗಿದೆ.