ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ: ನಾನು ಸ್ಪರ್ಧಿಸುತ್ತಿಲ್ಲ, ಮಲ್ಲಿಕಾರ್ಜುನ್​ ಪರ ನಿಲ್ಲುತ್ತೇನೆ: ದಿಗ್ವಿಜಯ್​ ಸಿಂಗ್​

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಿನೇಷನ್ ಫಾರ್ಮ್ ಭರ್ತಿಗೂ ಮುನ್ನ ಕಾಂಗ್ರೆಸ್​ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗ ಅಧ್ಯಕ್ಷ ಸ್ಥಾನದ ರೇಸ್‌ನಿಂದ ದಿಗ್ವಿಜಯ್ ಸಿಂಗ್ ಹೊರ ಬಿದ್ದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಂಟ್ರಿ ಆದ ನಂತರ ಈ ಬದಲಾವಣೆಯಾಗಿದೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಈಗ ನಾನು ಮಲ್ಲಿಕಾರ್ಜುನ ಖರ್ಗೆ ಪರ ನಿಲ್ಲುತ್ತೇನೆ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಹೇಳಿದ್ದಾರೆ.

Digvijaya Singh wont contest Cong prez poll  Cong prez poll  Digvijaya Singh announces  ಚುನಾವಣೆ ರೇಸ್​ನಿಂದ ಹಿಂದೆ ಸರಿದ ದಿಗ್ವಿಜಯ್​ ಸಿಂಗ್​ ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ  ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್​ ಸಿಂಗ್​
ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಹಿಂದೆ ಸರಿದ ದಿಗ್ವಿಜಯ್​ ಸಿಂಗ್​

By

Published : Sep 30, 2022, 12:17 PM IST

Updated : Sep 30, 2022, 2:57 PM IST

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಕ್ಷದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇಂದು (ಸೆಪ್ಟೆಂಬರ್ 30) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ದಿಗ್ವಿಜಯ್​ ಸಿಂಗ್ ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಿಕ್ಕಿಂತ ಮೊದಲೇ ದಿಗ್ವಿಜಯ್​ ಸಿಂಗ್​ ಎಲ್ಲರಿಗೂ ಶಾಕ್​ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಸೇರ್ಪಡೆಗೊಂಡ ನಂತರ ಕಾಂಗ್ರೆಸ್​ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ದಿಗ್ವಿಜಯ್ ಸಿಂಗ್ ಈಗ ಕಾಂಗ್ರೆಸ್​ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದಿದ್ದಾರೆ.

ಅಷ್ಟೇ ಅಲ್ಲ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಇಲ್ಲಿಯವರೆಗೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ ಎಂಬುದೂ ಗಮನಾರ್ಹ ಸಂಗತಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕುಮಾರಿ ಸೆಲ್ಜಾ ಮತ್ತು ಮುಕುಲ್ ವಾಸ್ನಿಕ್ ಕೂಡ ನಾಮಪತ್ರ ಸಲ್ಲಿಸಬಹುದು ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಪರ ನಿಂತ ದಿಗ್ವಿಜಯ್​:ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ನನ್ನ ಜೀವನದ ಉದ್ದಕ್ಕೂ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ನನ್ನ ನಾಯಕ ಮತ್ತು ನನ್ನ ಹಿರಿಯ, ಆದ್ದರಿಂದ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ಬದಲಿಗೆ ನಾನು ಮಲ್ಲಿಕಾರ್ಜುನ ಖರ್ಗೆ ಅವರ ಪರ ನಿಲ್ಲುತ್ತೇನೆ ಎಂದು ದಿಗ್ವಿಜಯ್​ ಸಿಂಗ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಹಿಂದೆ ಸರಿದ ದಿಗ್ವಿಜಯ್​ ಸಿಂಗ್​

ಗಾಂಧಿ ಕುಟುಂಬದಿಂದ ದಿಗ್ವಿಜಯ್​ ಸಿಂಗ್​ಗೆ ಇಲ್ಲ ಬೆಂಬಲ: ನಿನ್ನೆ ದಿಗ್ವಿಜಯ್ ಸಿಂಗ್ ಅವರು ಕೇಂದ್ರ ಚುನಾವಣಾ ಪ್ರಾಧಿಕಾರದಿಂದ ನಾಮಪತ್ರ ಪಡೆದು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದರು. ಅದಕ್ಕೂ ಮುನ್ನ ಶಶಿ ತರೂರ್ ಮತ್ತು ಅಶೋಕ್ ಗೆಹ್ಲೋಟ್ ಹೆಸರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ರೇಸ್​ನಲ್ಲಿ ಕಾಣಿಸಿಕೊಂಡಿತ್ತು.

ಆದರೆ, ರಾಜಸ್ಥಾನದ ರಾಜಕೀಯ ಬೆಳವಣಿಗೆ ನಂತರ ಗೆಹ್ಲೋಟ್​ ಹಿಂದೆ ಸರಿಯಬೇಕಾಯಿತು. ಅದರ ನಂತರ ದಿಗ್ವಿಜಯ್ ಸಿಂಗ್ ಅವರ ಹೆಸರು ಮುಂಚೂಣಿಯಲ್ಲಿ ಬಂತು. ಆದರೆ ಈಗ ಮಲ್ಲಿಕಾರ್ಜುನ ಖರ್ಗೆ ಅವರ ಪ್ರವೇಶದ ನಂತರ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದರು.

ದಿಗ್ವಿಜಯ್ ಸಿಂಗ್​ಗೆ ಗಾಂಧಿ ಕುಟುಂಬದ ಬೆಂಬಲ ಸಿಗುತ್ತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದ್ದು, ಈ ಕಾರಣದಿಂದ ಕಣದಿಂದ ಹಿಂದೆ ಸರಿಯುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಪರ ನಿಂತಿದ್ದಾರೆ ಎಂಬ ಮಾತುಗಳು ಸಹ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿವೆ.

ಮಲ್ಲಿಕಾರ್ಜುನ್​ ಖರ್ಗೆ ಹೆಸರು ಮುಂಚೂಣಿ:ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ತಿಂಗಳು ನಡೆಯುವ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಗೆ ಗೆಹ್ಲೋಟ್‌ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್‌ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಶಿರಸಾ ವಹಿಸಿ ಪಾಲಿಸುವೆ ಎಂಬ ಮಾಹಿತಿಯನ್ನು ಬಹಳ ಹಿಂದೆಯೇ ಖರ್ಗೆ ಅವರು ಸೋನಿಯಾಗೆ ತಿಳಿಸಿರುವುದನ್ನು ಗಮನಿಸಬಹುದು. ಹೀಗಾಗಿ ಸೋನಿಯಾ ಅವರು ಖರ್ಗೆ ಅವರನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ಕೊನೆಯದಾಗಿ ಪಕ್ಷ ಖರ್ಗೆಗೆ ಏನು ಹೇಳುತ್ತದೆಯೋ ಅದನ್ನು ಅವರು ಮಾಡುತ್ತಾರೆ ಎಂದು ಖರ್ಗೆ ಅವರ ಆಪ್ತರೊಬ್ಬರು ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಒಂದು ವೇಳೆ ಸೋನಿಯಾ ಸೂಚಿಸಿದರೆ ಅದಕ್ಕೆ ಖರ್ಗೆ ನಿರಾಕರಿಸುವುದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಂತಹ ವಿರೋಧ ಪಕ್ಷಗಳ ನಾಯಕರ ಜತೆ ಉತ್ತಮ ಸಂಪರ್ಕ ಹಾಗೂ ಸಂಬಂಧ ಇರಿಸಿಕೊಂಡಿದ್ದಾರೆ. ಖರ್ಗೆ ಅವರ ಬದ್ಧತೆ ಮತ್ತು ಕಾರ್ಯವೈಖರಿಯು ಪಕ್ಷಕ್ಕೆ ಇನ್ನಷ್ಟು ಲಾಭ ಉಂಟುಮಾಡಲಿದೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಇದನ್ನು ಓದಿ:ಯಾವ ಶಕ್ತಿಯಿಂದಲೂ ಭಾರತ್​ ಜೋಡೋ ಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ: ರಾಗಾ ಗುಡುಗು

Last Updated : Sep 30, 2022, 2:57 PM IST

ABOUT THE AUTHOR

...view details