ನವದೆಹಲಿ:ರಾಜಕಾರಣ ಇರುವುದು ಜನಸೇವೆಗೆ. ಭತ್ಯೆ, ವೇತನ, ಸೌಲಭ್ಯ ಸೇರಿ ರಾಜಕಾರಣಿಗಳು ಜನರ ಹಣದಲ್ಲಿ ಲಕ್ಷಗಟ್ಟಲೆ ತಿಂಗಳಿಗೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಶಾಸಕರ ವೇತನದಲ್ಲಿ 66 ಪ್ರತಿಶತ ಹೆಚ್ಚಿಸಿದ್ದು, ಇದಕ್ಕೆ ರಾಷ್ಟ್ರಪತಿಗಳು ಅಂಗೀಕಾರ ನೀಡಿದ್ದಾರೆ.
ಮಾರ್ಚ್ 17 ರಿಂದ ಪ್ರಾರಂಭವಾಗಲಿರುವ ದೆಹಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಶಾಸಕರು ಮತ್ತು ಸಚಿವರ ವೇತನ ಮತ್ತು ಭತ್ಯೆಗಳನ್ನು ಶೇಕಡಾ 66 ಕ್ಕಿಂತ ಹೆಚ್ಚು ಏರಿಸಲಾಗಿದೆ. ದೆಹಲಿ ಸರ್ಕಾರದ ಕಾನೂನು ಇಲಾಖೆಯ ಅಧಿಸೂಚನೆಯ ಪ್ರಕಾರ, ಶಾಸಕರು ಈಗ ಪ್ರತಿ ತಿಂಗಳು 90,000 ರೂ.ಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಶಾಸಕರ ಸಂಬಳ 54,000 ರೂಪಾಯಿ ಇತ್ತು.
ಮೂಲವೇತನ, ದಿನಭತ್ಯೆ ಸೇರಿದಂತೆ ಎಲ್ಲವೂ ಹೆಚ್ಚಳ ಮಾಡಲಾಗಿದೆ. 12,000 ರೂ.ಗಳಷ್ಟಿದ್ದ ಶಾಸಕರ ಮೂಲ ವೇತನ ಈಗ 30,000 ರೂ.ಗೆ ಏರಿದೆ. ದಿನಭತ್ಯೆಯನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಿಸಲಾಗಿದೆ. ಇದಲ್ಲದೇ, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ವೇತನ ಮತ್ತು ಭತ್ಯೆಯನ್ನೂ ಪರಿಷ್ಕರಿಸಲಾಗಿದ್ದು, ಮಾಸಿಕವಾಗಿ 1.70 ಲಕ್ಷ ರೂ. ಪಡೆಯಲಿದ್ದಾರೆ. ಈ ಹಿಂದೆ ಇವರಿಗೆ ತಿಂಗಳಿಗೆ 72 ಸಾವಿರ ರೂ. ಸಿಗುತ್ತಿತ್ತು.
ದೆಹಲಿ ವಿಧಾನಸಭೆಯ ಶಾಸಕರು ಮತ್ತು ಮಂತ್ರಿಗಳ ವೇತನವನ್ನು ಹೆಚ್ಚಿಸುವ ಪ್ರಸ್ತಾಪವನ್ನು 2022 ರಲ್ಲಿ ಅಂಗೀಕರಿಸಿತ್ತು. ಇದನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿತ್ತು. ಇದೀಗ ರಾಷ್ಟ್ರಪತಿಗಳು ಕೂಡ ಸಹಿ ಹಾಕಿ ಪ್ರಸ್ತಾವನೆ ಪಾಸು ಮಾಡಿದ್ದಾರೆ.