ನವದೆಹಲಿ:ಪ್ರಮುಖ ದಾಳಿಗೆ ಸಂಚು ರೂಪಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದ್ದು, ಆತನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಎಕೆ -47 ಹಾಗೂ ಗ್ರೆನೇಡ್ಗಳನ್ನು ಜಪ್ತಿ ಮಾಡಲಾಗಿದೆ.
ಭಯೋತ್ಪಾದಕನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿ ಎಂದು ಗುರುತಿಸಲಾಗಿದೆ. ಆತನ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಆದೇಶದಂತೆ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮೊಹಮ್ಮದ್ ಅಶ್ರಫ್ ದಾಳಿಗೆ ನಡೆಸುತ್ತಿದ್ದ ಸಂಚಿನ ಬಗ್ಗೆ ಹೆಚ್ಚಿನ ವಿವರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ದೆಹಲಿಯಲ್ಲಿ ಕೆಲವು ದಿನಗಳಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಬ್ಬಗಳ ವೇಳೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ ಅನುಸಾರ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಪಾಕ್ ಭಯೋತ್ಪಾದಕನನ್ನು ಬಂಧಿಸಲಾಗಿದೆ.
ನಿಖರ ಮಾಹಿತಿ ಮೇರೆಗೆ ಲಕ್ಷ್ಮಿನಗರ ಪ್ರದೇಶದ ಮೇಲೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದು, ಆತ ನೇಪಾಳ ಮಾರ್ಗವಾಗಿ ದೆಹಲಿಗೆ ಬಂದಿರುವುದು ತಿಳಿದುಬಂದಿದೆ. ಹಬ್ಬದ ವೇಳೆ ದಾಳಿ ನಡೆಸಲು ಆತ ಸಂಚು ರೂಪಿಸುತ್ತಿದ್ದ. ನಕಲಿ ಗುರುತಿನ ಚೀಟಿಯನ್ನು ಹೊಂದಿದ್ದ ಎಂದು ವಿಶೇಷ ಸೆಲ್ ಡಿಸಿಪಿ ಪ್ರಮೋದ್ ಕುಶ್ವಾಹ ಹೇಳಿದ್ದಾರೆ.
ಇದನ್ನೂ ಓದಿ:ಉಚಿತ ಕೋವಿಡ್ ಲಸಿಕೆಗೆ ಹಣ ಎಲ್ಲಿಂದ ಬರುತ್ತೆ?: ಇಂಧನ ಬೆಲೆ ಏರಿಕೆಗೆ ಕೇಂದ್ರ ಸಚಿವರ ಸಮಜಾಯಿಷಿ