ನವದೆಹಲಿ: ಕೋವಿಡ್ ಲಸಿಕೆ ಪಡೆಯುವವರಲ್ಲಿ ಜ್ವರ, ತಲೆನೋವು ಹಾಗೂ ಸಣ್ಣಪುಟ್ಟ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ದೆಹಲಿ ಮೂಲದ ವ್ಯಕ್ತಿಯ ದೇಹದಲ್ಲಿ ಮಾತ್ರ ಇದೆಲ್ಲವನ್ನೂ ಮೀರಿದ ಬದಲಾವಣೆ ಕಾಣಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಲಸಿಕೆ ಪಡೆದ ಈ ವ್ಯಕ್ತಿಯ ದೇಹದಲ್ಲಿ ಅಯಸ್ಕಾಂತ (ಮ್ಯಾಗ್ನೆಟ್) ಶಕ್ತಿ ಉತ್ಪತ್ತಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ತಾನು ಮೇ 15 ರಂದು ಲಸಿಕೆ ಪಡೆದಿದ್ದೇನೆ. ಆ ಬಳಿಕ ತನ್ನ ದೇಹವನ್ನು ಕಬ್ಬಿಣದ ವಸ್ತುಗಳು ಆಕರ್ಷಿಸುತ್ತಿವೆ ಎಂದು ದೆಹಲಿಯ ಜಹಾಂಗೀರ್‌ಪುರಕ್ಕೆ ಸೇರಿದ ರಾಜೇಶ್ ಹೇಳುತ್ತಿದ್ದಾರೆ. ವ್ಯಾಕ್ಸಿನ್ ಪಡೆದ ಕೆಲವು ಗಂಟೆಗಳ ಬಳಿಕ ಅಯಸ್ಕಾಂತ ಶಕ್ತಿ ಉತ್ಪತ್ತಿಯಾಗುತ್ತಿದೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಇದು ಕೇವಲ ಲಸಿಕೆ ಪಡೆದ ಬಳಿಕವಷ್ಟೇ ಹೀಗೆ ಆಗುತ್ತಿದೆ ಎಂದು ಹೇಳಿದ್ದಾರೆ.
ಇದರ ಪ್ರಾತ್ಯಕ್ಷಿಕೆಗಾಗಿ ಕೆಲ ವಸ್ತುಗಳನ್ನು ತನ್ನ ದೇಹಕ್ಕೆ ಅಂಟಿಸಿಕೊಂಡು ರಾಜೇಶ್ ತೋರಿಸಿದ್ದಾರೆ. ತನಗೆ ಈ ಮೊದಲು ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರನ್ನು ಭೇಟಿ ಮಾಡುವ ಅಗತ್ಯವೂ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹದ್ದೇ ಮತ್ತೊಂದು ಪ್ರಕರಣ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೆಳಕಿಗೆ ಬಂದಿದೆ. ಅರವಿಂದ್ ಸೋನಾರ್ ಎಂಬುವವರು ಕೋವಿಡ್‌ನ ಎರಡನೇ ಡೋಸ್ ಪಡೆದ ಬಳಿಕ ತಮ್ಮ ದೇಹ ಅಯಸ್ಕಾಂತ ಶಕ್ತಿಯ ರೀತಿಯಲ್ಲಿ ಪರಿವರ್ತನೆ ಆಗಿದೆ ಎಂದು ಹೇಳಿದ್ದಾರೆ. ಮೆಟಲ್ ಮತ್ತು ಸ್ಟೀಲ್ ನಿಂದ ತಯಾರಿಸಿರುವ ಚಮಚ, ನಾಣ್ಯ ಸೇರಿದಂತೆ ಇತರೆ ವಸ್ತುಗಳು ಭುಜ ಹಾಗೂ ಎದೆ ಭಾಗದಲ್ಲಿ ಅಂಟಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.