ನವದೆಹಲಿ:ಪ್ರಧಾನಮಂತ್ರಿಗೆ ಭದ್ರತೆ ಒದಗಿಸಲು ನಿಯೋಜನೆಗೊಂಡಿರುವ ಎಸ್ಪಿಜಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನ ದೆಹಲಿ ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ಗೆ ಮುಂದೂಡಿ ಇಂದು ಮಹತ್ವದ ಆದೇಶ ಹೊರಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ಅರ್ಜಿದಾರರಿಗೆ ಆದೇಶ ನೀಡಲು ಹೈಕೋರ್ಟ್ ಮುಂದಾಗಿತ್ತು. ಆದರೆ, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ತನಿಖಾ ತಂಡ ಸಹ ರಚನೆ ಮಾಡಿರುವ ಕಾರಣ ಯಾವುದೇ ರೀತಿಯ ಆದೇಶ ನೀಡದೇ ವಿಚಾರಣೆ ಮುಂದೂಡಿದೆ.
ಕಳೆದ ಕೆಲ ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರಿಗೆ ಭದ್ರತಾ ಲೋಪ ಉಂಟಾಗಿದ್ದು, ಸುಮಾರು 20 ನಿಮಿಷಗಳ ಕಾಲ ಫ್ಲೈ-ಓವರ್ನಲ್ಲಿ ಸಿಲುಕಿಕೊಂಡಿದ್ದರು. ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.