ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಸುತ್ತ ಗುರುವಾರ ಬೆಳಗ್ಗೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಕೇಜ್ರಿವಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಕೇಜ್ರಿವಾಲ್ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವೇಶಿಸದಂತೆ ದೆಹಲಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ ಎಂದು ಆಪ್ ಆರೋಪಿಸಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರೂ ವಿಚಾರಣೆಗೆ ದೆಹಲಿ ಸಿಎಂ ಗೈರಾಗಿದ್ದರು. ಈ ಬೆಳವಣಿಗೆ ಬಳಿಕ, ಆಪ್ ಸಂಸದ ಸಂದೀಪ್ ಪಾಠಕ್ ಮತ್ತು ದೆಹಲಿ ಸರ್ಕಾರದ ಸಚಿವರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ತಮ್ಮ ಮೂಲಗಳನ್ನು ಉಲ್ಲೇಖಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಕೇಜ್ರಿವಾಲ್ ಮನೆ ಮೇಲೆ ಇಡಿ ದಾಳಿ ನಡೆಸಬಹುದು. ಈ ವೇಳೆ ಕೇಜ್ರಿವಾಲ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದಿದ್ದಾರೆ. ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿ, 'ಇಡಿ ತಂಡ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ' ಅಂತಾ ಬರೆದುಕೊಂಡಿದ್ದಾರೆ.
ಸಿಎಂ ಕೇಜ್ರಿವಾಲ್ ಅವರು ಇಡಿ ಮೂರನೇ ಸಮನ್ಸ್‌ಗೆ ಬುಧವಾರ ಹಾಜರಾಗದೆ, ತಮ್ಮ ಉತ್ತರ ಕಳುಹಿಸಿದ್ದರು. ಅದರಲ್ಲಿ, 'ನಾನು ಎತ್ತಿರುವ ಆಕ್ಷೇಪಣೆಗೆ ನೀವು ಪ್ರತಿಕ್ರಿಯಿಸದಿರುವುದು ಮತ್ತು ಹಿಂದಿನಂತೆಯೇ ಮತ್ತೊಮ್ಮೆ ಸಮನ್ಸ್ ಕಳುಹಿಸಿರುವುದು ನನಗೆ ಆಶ್ಚರ್ಯ ತಂದಿದೆ. ಆದ್ದರಿಂದ, ಈ ಸಮನ್ಸ್‌ಗಳಿಗೆ ಯಾವುದೇ ಸಮರ್ಥನೆ ಇಲ್ಲ ಎಂದು ಅನಿಸುತ್ತಿದೆ’ ಎಂದು ಇಡಿ ವಿರುದ್ಧ ಕಿಡಿಕಾರಿದ್ದರು.