ಅಹಮದಾಬಾದ್(ಗುಜರಾತ್):ಮೋದಿ ತವರು ರಾಜ್ಯ ಗುಜರಾತ್ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಆಟೋ ಚಾಲಕನ ಮನೆಯಲ್ಲಿ ಊಟ ಮಾಡುವ ಮೂಲಕ ಗಮನ ಸೆಳೆದಿದ್ದು, ಜನಸಾಮಾನ್ಯರ ಹೃದಯ ಗೆದ್ದಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಆಟೋರಿಕ್ಷಾ ಚಾಲಕನ ಆಹ್ವಾನದ ಮೇರೆಗೆ ಆಟೋದಲ್ಲೇ ಅವರ ಮನೆಗೆ ತೆರಳಿ ಭೋಜನ ಸವಿದಿದ್ದಾರೆ. ಈ ವೇಳೆ ಪ್ರೋಟೋಕಾಲ್ ವಿಚಾರವಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವ ಘಟನೆ ಸಹ ನಡೆದಿದೆ.
ಮುಂದಿನ ಮೂರು ತಿಂಗಳಲ್ಲಿ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಈ ಹಿಂದಿನಿಂದಲೂ ಭರ್ಜರಿ ತಯಾರಿ ನಡೆಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲಿಂದ ಮೇಲೆ ಗುಜರಾತ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸದ್ಯ ಎರಡು ದಿನದ ಪ್ರವಾಸದಲ್ಲಿರುವ ಕೇಜ್ರಿವಾಲ್, ನಿನ್ನೆ ಮಧ್ಯಾಹ್ನ ಆಟೋರಿಕ್ಷಾ ಚಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಆಟೋ ಚಾಲಕ ವಿಕ್ರಂ ದಾಂತಾನಿ ಎಂಬುವರು ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಜ್ರಿವಾಲ್ ರಾತ್ರಿ 8 ಗಂಟೆಗೆ ಬರುವುದಾಗಿ ತಿಳಿಸಿದ್ದರು.